
ಬೆಂಗಳೂರು, ಜ.20: ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ, ಯೋಜನೆ–ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ʼಅಗತ್ಯ, ಪುರಾವೆ ಮತ್ತು ಫಲಿತಾಂಶ ಆಧಾರಿತ ನೀತಿ ಮತ್ತು ಯೋಜನೆʼ ವಿಷಯದ ಕುರಿತು ನಗರದ ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ, ಶೇಷಾದ್ರಿಪುರಂನಲ್ಲಿ ಸೋಮವಾರ ಒಂದು ದಿನದ ರಾಜ್ಯಮಟ್ಟದ ವಿಚಾರಗೋಷ್ಠಿ ನಡೆಯಿತು.
ವಿಚಾರಗೋಷ್ಠಿಯಲ್ಲಿ ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕರಾದ ಬಿಜ್ಜವರ ಲೋಕೇಶ್ ಮಾತನಾಡಿ, ನೀತಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಅಂಶಗಳನ್ನು ಸಮರ್ಥವಾಗಿ ಅರ್ಥಮಾಡಿಕೊಂಡು ಜಾರಿಗೆ ತಂದಲ್ಲಿ ರಾಜ್ಯ ಮಾತ್ರವಲ್ಲದೆ ದೇಶವೇ ಉನ್ನತಿಗೆ ತಲುಪುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನನ್ನ ಮೆಂಟರ್‌ಗಳು ಹಾಗೂ ಹಿರಿಯರಾದ ಬಿ.ಆರ್. ಪಾಟೀಲ್ ಹಾಗೂ ಡಿ.ಆರ್. ಪಾಟೀಲ್ ಅವರಿಗೆ ನನ್ನ ವಿನಂತಿ. ರಾಜ್ಯದಲ್ಲಿ ನೀತಿಗಳು ಇದ್ದರೂ, ನಿರ್ಣಯಗಳಲ್ಲಿ ಅವುಗಳ ಸ್ಪಷ್ಟ ಅನ್ವಯ ಕಾಣಿಸುತ್ತಿಲ್ಲ. ನೀತಿ ಅಸ್ತಿತ್ವದಲ್ಲಿದೆ; ಆದರೆ ಅದರಂತೆ ತೀರ್ಮಾನಗಳು ಆಗುತ್ತಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆಗಳ ವಿಚಾರವಾಗಿ ಮಾತನಾಡಿದ ಲೋಕೇಶ್ ಅವರು, “ಯೋಜನೆಗಳು ಪ್ಲ್ಯಾನಿಂಗ್ ಆಧಾರಿತವಾಗಿರಬೇಕು. ಆದರೆ ವಾಸ್ತವದಲ್ಲಿ ವ್ಯಕ್ತಿಗಳ ನಿರ್ಧಾರಗಳ ಮೇಲೆ ಅವಲಂಬಿತವಾಗಿವೆ. ಕೆಲವೊಮ್ಮೆ ಗ್ರಾಮ ಪಂಚಾಯತ್ ಸದಸ್ಯರು, ಅಧ್ಯಕ್ಷರು, ಶಾಸಕರು, ವಿಧಾನಪರಿಷತ್ ಸದಸ್ಯರ ನಿರ್ಧಾರಗಳಿಂದಲೇ ಯೋಜನೆಗಳು ರೂಪುಗೊಳ್ಳುತ್ತಿವೆ. ಇದರಿಂದ ಯೋಜನಾ ಪ್ರಕ್ರಿಯೆಯೇ ಹದಗೆಡುತ್ತಿದೆ,” ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜನೆ ಕುರಿತು ಮಾತನಾಡಿ, ಇಲಾಖೆಗಳ ನಡುವಿನ ಸಮನ್ವಯದ ಕೊರತೆಯನ್ನು ತೀವ್ರವಾಗಿ ಟೀಕಿಸಿದರು. “ರಸ್ತೆ ಕತ್ತರಿಸಿದ ಬಳಿಕ ಲೈನ್ ಹಾಕುತ್ತಾರೆ; ರಸ್ತೆ ಪೂರ್ಣಗೊಂಡ ನಂತರ ಮತ್ತೆ ಮಣ್ಣು ತೆಗೆಯುತ್ತಾರೆ. ಈ ರೀತಿಯ ಅಸಮರ್ಪಕ ಸಂಯೋಜನೆ ರಾಜ್ಯದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಇಲಾಖೆಗಳ ನಡುವಿನ ಸಮನ್ವಯ ಸಂಪೂರ್ಣವಾಗಿ ಕೊರತೆಯಾಗಿದೆ,” ಎಂದರು.
ಡಾಟಾ ಅತ್ಯಂತ ಮಹತ್ವದ್ದು. ಆದರೆ ರಾಜ್ಯದಲ್ಲಿ ಸರಿಯಾದ ಅಂಕಿ-ಅಂಶಗಳ ಕೊರತೆ ಇದೆ. ಅಧಿಕಾರಿಗಳು ಸಚಿವರಿಗೆ ನೀಡುವ ಮಾಹಿತಿ ತಪ್ಪಾಗಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಚಿವರೇ ಕ್ಷಮೆ ಕೇಳುವಂತಹ ಸ್ಥಿತಿ ಉಂಟಾಗಿದೆ. ಇದು ನನಗೆ ವೈಯಕ್ತಿಕವಾಗಿ ಅವಮಾನಕರವಾಗಿದೆ ಬಿಜ್ಜವರ ಲೋಕೇಶ್ ಎಂದು ಬೇಸರ ವ್ಯಕ್ತಪಡಿಸಿದರು.
ಅಂತಿಮವಾಗಿ ಮಾತನಾಡಿದ ಅವರು, “ನೀತಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ – ಈ ನಾಲ್ಕು ಅಂಶಗಳನ್ನು ಕಾರ್ಯರೂಪಕ್ಕೆ ತರಲು ನಮ್ಮಲ್ಲಿ ಸಂಪೂರ್ಣ ಶಕ್ತಿ ಇದೆ. ಜಗತ್ತಿಗೆ ಪರಿಹಾರಗಳನ್ನು ನೀಡುತ್ತಿರುವ ನಾವು, ನಮಗೆ ಬೇಕಾದ ಪರಿಹಾರವನ್ನು ರೂಪಿಸಿಕೊಳ್ಳಲಾಗದಿದ್ದರೆ ಅದು ನಾಚಿಕೇಡಿನ ಸಂಗತಿ. ಬಿ.ಆರ್. ಪಾಟೀಲ್ ಮತ್ತು ಡಿ.ಆರ್. ಪಾಟೀಲ್ ಅವರು ಅನುಮತಿ ನೀಡಿದರೆ, ಮೂರರಿಂದ ಆರು ತಿಂಗಳೊಳಗೆ ರಾಜ್ಯಕ್ಕೆ ಅಗತ್ಯವಿರುವ ಎಲ್ಲಾ ಅಂಕಿ-ಅಂಶಗಳನ್ನು ಸಂಪೂರ್ಣವಾಗಿ ಸಂಗ್ರಹಿಸಿ ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇವೆ,” ಎಂದು ಸ್ಪಷ್ಟಪಡಿಸಿದರು.





