ಬಳ್ಳಾರಿ ಬಸ್ ಸ್ಟ್ಯಾಂಡ್ ಶೌಚಾಲಯ ಅವ್ಯವಸ್ಥೆ: ವಿಭಾಗೀಯ ನಿಯಂತ್ರಣಾಧಿಕಾರಿಗೆ ಪ್ರಶ್ನೆ ಫೌಂಡೇಶನ್ ಸಂಸ್ಥಾಪಕ ಅರುಣ್ ಭೂಪಾಲ್ ಪತ್ರ

0
27

ಬಳ್ಳಾರಿ, ಏ.7: ನಗರದ ಹೊಸ ಬಸ್ ಸ್ಟ್ಯಾಂಡ್‌ನ ಸಾರ್ವಜನಿಕ ಶೌಚಾಲಯದಲ್ಲಿ ಅವ್ಯವಸ್ಥೆ ಹಾಗೂ ಹೆಚ್ಚುವರಿ ಶುಲ್ಕ ವಸೂಲಿ ನಡೆಯುತ್ತಿರುವ ಬಗ್ಗೆ ಪ್ರಶ್ನೆ ಫೌಂಡೇಶನ್ ಸಂಸ್ಥಾಪಕ ಹಾಗೂ ವಕೀಲ ಅರುಣ್ ಭೂಪಾಲ್ ಅವರು ಗಮನ ಸೆಳೆದಿದ್ದಾರೆ.

ಈ ಸಂಬಂಧ ಅವರು ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದು, ಶೌಚಾಲಯದಲ್ಲಿ ಸ್ವಚ್ಛತೆ ಕೊರತೆ, ಸಮರ್ಪಕ ನಿರ್ವಹಣೆಯ ಅಭಾವ ಹಾಗೂ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ. ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯವಾಗಿರುವ ಶೌಚಾಲಯದ ದುಸ್ಥಿತಿ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಮನವಿಯಲ್ಲಿ ಸಂಬಂಧಿತ ಗುತ್ತಿಗೆದಾರರ ವಿರುದ್ಧ ತಕ್ಷಣ ತನಿಖೆ ನಡೆಸಬೇಕು, ಹೆಚ್ಚುವರಿ ಶುಲ್ಕ ವಸೂಲಿ ನಿಲ್ಲಿಸಬೇಕು, ನಿಯಮ ಉಲ್ಲಂಘಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಗುತ್ತಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಇದಲ್ಲದೆ, ಶೌಚಾಲಯದ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ಸುಧಾರಿಸಿ, ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಅಧಿಕೃತ ದರಪಟ್ಟಿ ಪ್ರದರ್ಶಿಸುವಂತೆ ಒತ್ತಾಯಿಸಲಾಗಿದೆ.

ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಹಾಗೂ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಅರುಣ್ ಭೂಪಾಲ್ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here