ಮೌನದ ಬೆಲೆ

0
32

ಲೇಖಕರು: ಗಣೇಶ ರಾಮಚಂದ್ರ ಮಾಂಡ್ರೆ
ಸಾಹಿತಿಗಳು, ಅರಿವು ಬೋದಿ ಪ್ರಕಾಶನ

ಅವನು ಅಲ್ಲಿಗೆ ಬರೋದು ಮೊದಲಲ್ಲ. ಆದರೆ ಈ ಸಲ ಕೈಯಲ್ಲಿ ನೋಟ್ಸ್‌ ಪುಸ್ತಕ, ಕಣ್ಣಲ್ಲಿ “ಕಥೆ” ಅನ್ನೋ ಹಸಿವು.
ನಗರದ ಅಂಚಿನ ಆ ಮನೆಗೆ ಜನ ಬರ್ತಾರೆ–ಹೋಗ್ತಾರೆ. ಅವನು ಮಾತ್ರ ಕುಳಿತು ಕೇಳ್ತಾನೆ.
“ನಿನ್ನ ಆತ್ಮಕಥೆ ಬರೀತೀನಿ,” ಅಂದ.
ಅವನಿಗೆ ಅದು ದೊಡ್ಡ ಮಾತು. ಸಮಾಜಕ್ಕೆ ಕೊಡುವ ಸಾಕ್ಷಿ. ಅವಳಿಗೆ ಮಾತ್ರ ಹಳೆಯದೇನೋ ಕೇಳಿದಂತೆ.
ಅವಳು ನಕ್ಕಳು. ನಗು ನಗು ಅಂತ ಅಲ್ಲ—ಕಣ್ಣಂಚಿನಲ್ಲಿ ತುಂಬಿಕೊಂಡ ನೀರನ್ನ ಮರೆಮಾಡೋ ನಗು.
“ಮಾರಾಟವಾದವಳನ್ನು,” ಅಂದಳು ನಿಧಾನವಾಗಿ,
“ಮತ್ತೆ ಮಾರಾಟಕ್ಕೆ ಇಡುವೆಯಾ?”
ಅವನ ನಗು ಅಲ್ಲಿ ನಿಂತುಹೋಯ್ತು.
ಅವಳು ಹೇಳ್ತಾ ಹೋದಳು.
ಹೆಸರನ್ನ ಹೇಗೆ ಕಳೆದುಕೊಂಡೆ ಅಂತ.
ದೇಹಕ್ಕಿಂತ ಮೊದಲು ಮೌನ ಹೇಗೆ ಮಾರಾಟ ಆಯ್ತು ಅಂತ.
ಒಬ್ಬೊಬ್ಬ ಗ್ರಾಹಕ ಹೋದಂತೆ, ಒಂದೊಂದು ಕನಸು ಹೇಗೆ ಹೊರಟುಹೋಯ್ತು ಅಂತ.
“ನೀನು ಬರೀತೀಯ,” ಅಂದಳು,
“ಜನ ಓದುತ್ತಾರೆ. ಅಳ್ತಾರೆ. ಮತ್ತೆ ಮರೆತುಬಿಡ್ತಾರೆ.
ನನಗೆ ಮಾತ್ರ ನಾಳೆ ಮತ್ತೆ ಅದೇ ಬಾಗಿಲು.”
ಅವನು ಆ ದಿನ ಏನೂ ಬರೆಯಲಿಲ್ಲ.
ಹೊರಟಾಗ ಪುಸ್ತಕ ಖಾಲಿ ಇತ್ತು.
ಆದ್ರೆ ಆ ಖಾಲಿತನದಲ್ಲೇ ಅವನಿಗೆ ಮೊದಲ ಪಾಠ ಸಿಕ್ಕಿತ್ತು—
ಕೆಲವೊಂದು ಕಥೆಗಳು ಬರೆಯೋದಕ್ಕಲ್ಲ,
ಬರೆಯದೇ ಉಳಿಸೋದಕ್ಕೇ ಗೌರವ.
ಮತ್ತೆ ಅವನು ಬಂದಾಗ,
ಕೈಯಲ್ಲಿ ಪುಸ್ತಕ ಇರಲಿಲ್ಲ.
ಕಿವಿ ಮಾತ್ರ ಇತ್ತು.

LEAVE A REPLY

Please enter your comment!
Please enter your name here