ಬದುಕುವ ಕಲೆಯೇ ಬಹು ದೊಡ್ಡ ಸಾಧನೆ

0
26
Advertisement

ಲೇಖನ: ಮಂಜುಳಾ ಭಟ್.ಉಡುಪಿ

ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ, ಒಂದು ಚೌಕಟ್ಟಿನಲ್ಲಿ ಬಾಳು ಸವೆಸಿ, ಭಗವಂತನ ಕರೆ ಬರುವವರೆಗೆ ಬದುಕುವುದೇ ದೊಡ್ಡ ಸಾಧನೆ. ಈ ಸಾಧನೆಯ ಮುಂದೆ ಬೇರೆಲ್ಲಾ ಸಾಧನೆ ಅರ್ಥ ಕಳೆದುಕೊಳ್ಳುತ್ತದೆ.

ಬದುಕಿನಲ್ಲಿ ಏನು ಸಾಧನೆ ಮುಖ್ಯ ಎಂದು ನನ್ನನ್ನು ಕೇಳಿದರೆ, ಭಗವಂತನ ಕರೆ ಬರುವವರೆಗೆ ಬದುಕುವುದೇ ದೊಡ್ಡ ಸಾಧನೆ ಎನ್ನುವೆ. ಕಾರಣ ಜೀವನ ಎಂದ ಮೇಲೆ ಕಷ್ಟ ,ನೋವು, ಬೀಳು ಸಹಜ. ಇದನ್ನು ಎದುರಿಸಿ ಬದುಕು ಸಾಗಿಸುವುದು ಎಲ್ಲಕ್ಕಿಂತ ಹೆಚ್ಚು. ಈ ಮಾನಸಿಕ ಗಟ್ಟಿತನ ಎಲ್ಲರೂ ಬೆಳೆಸಿಕೊಳ್ಳಬೇಕಾದ ಗುಣ.
ಎಲ್ಲವೂ ಚೆನ್ನಾಗಿ ಇದ್ದರೂ ಸಣ್ಣ ಕಾರಣಕ್ಕೆ ಇಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.


ಬದುಕಲು ಬೇಕಾದಷ್ಟು ಅವಕಾಶಗಳಿವೆ. ಮಕ್ಕಳಲ್ಲಿಯೂ ಅಷ್ಟೇ. ತಪ್ಪು ಸಹಜ, ಬೈಗುಳವೂ ಸಹಜ, ಇದೆಲ್ಲವನ್ನು ನಾವೂ ಎದುರಿಸಿಯೇ ಬಂದಿರೋದು ಎಂಬುದನ್ನು ಪಾಲಕರು ಪದೇಪದೇ ನೆನಪಿಸಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿ ಇದೆ. ಅಂಕಗಳೇ ಮುಖ್ಯ ಎಂಬ ಭಾವನೆ ಬಿತ್ತುವುದು, ಶ್ರೀಮಂತಿಕೆಯಿದ್ದರೆ ಮಾತ್ರ ಬದುಕು ಚೆನ್ನಾಗಿ ಇರುತ್ತದೆ ಎಂದುಕೊಳ್ಳುವುದು, ವಿಷಯಗಳನ್ನು ಅತಿಯಾಗಿ ಯೋಚಿಸಿ ಒತ್ತಡ ತಂದುಕೊಳ್ಳುವುದು, ಹೀಗೇ ಹಲವಾರು ಸಂಗತಿಗಳು ಆತ್ಮಹತ್ಯೆಗೆ ಕಾರಣವಾಗುತ್ತಿವೆ. ಮೇಲ್ಮಟ್ಟದ ಜೀವನ ನಡೆಸುವವರ ಜೊತೆ ತಮ್ಮನ್ನು ಹೋಲಿಸಿ ಕೊಳ್ಳುವುದು ಇಂದು ಹಲವರಲ್ಲಿ ಕಂಡುಬರುವ ದೊಡ್ಡ ರೋಗ ಎಂದೇ ಹೇಳಬಹುದು.

ಹಾಸಿಗೆ ಇದ್ದಷ್ಟು ಕಾಲು ಚಾಚುವ ಸ್ವಭಾವ ದೂರವಾಗಿ, ಕೊಳ್ಳುಬಾಕ ಸಂಸ್ಕೃತಿ ಹೆಚ್ಚಿರುವುದು ಹಲವರ ಕುಟುಂಬ ಕಲಹ, ವಿಚ್ಛೇದನಕ್ಕೆ ಕಾರಣವಾಗಿದೆ. ಇದು ಎಷ್ಟೋ ಸಲ ಒಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾಗುವುದೂ ಇದೆ.ಒಬ್ಬ ಆತ್ಮೀಯರನ್ನು ಕಳೆದುಕೊಂಡಾಗ ಇನ್ನೊಬ್ಬರು ಬದುಕಲಾಗದ ಸ್ಥಿತಿ ತಲುಪುವುದು ನಿಜಕ್ಕೂ ಖೇದಕರ ಸಂಗತಿ.

‘ಸತ್ತು ಸಾಧಿಸುವುದಾದರೂ ಏನು? ಒಂದಲ್ಲಾ ಒಂದು ದಾರಿ ಬದುಕಲು ಸಿಗಬಹುದು, ನೋಡೋಣ ಧೈರ್ಯದಿಂದ ಇರೋಣ’ ಎಂಬ ಭಾವ ಮೂಡಬೇಕು. ಎಷ್ಟೋ ಜೀವಗಳು ನರಳುತ್ತಾ ಇದ್ದರೂ ಆತ್ಮಹತ್ಯೆ ಯೋಚನೆ ಮಾಡದೇ, ಸಹಜ ಸಾವಿಗಾಗಿ ಕಾದಿರುತ್ತಾರೆ. ಕೈಕಾಲು ಊನವಿದ್ದವರೂ ಕಷ್ಟಪಟ್ಟು ಬದುಕು ಕಟ್ಟಿಕೊಂಡವರಿದ್ದಾರೆ.
ಮಕ್ಕಳ ಅಭಿವೃದ್ಧಿಯಲ್ಲೇ ನೆಮ್ಮದಿ ಕಾಣುವ ಒಂಟಿ (ವಿಧವೆಯರು)ತಾಯಂದಿರು ಇದ್ದಾರೆ. ಮನೆಯಲ್ಲಿ ಹೆಣ್ಣು ದಿಕ್ಕಿಲ್ಲದಿದ್ದರೂ ನಿರ್ವಹಿಸುತ್ತಿರುವ ಪುರುಷರು ಇದ್ದಾರೆ. ಬದುಕಬೇಕು ಎಂಬ ಛಲ ಇದ್ದರೆ ಸಾಕು. ಸಾಗುತ್ತದೆ ಜೀವನ ಪಯಣ.

ಇಂದು ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಕರುಣೆ ತೋರುವ ಭಾವ ಕಡಿಮೆ. ಏಕೆಂದರೆ ಇದೊಂದು ಹೇಡಿತನ ಎಂಬ ಅಭಿಪ್ರಾಯ. ಎಲ್ಲವೂ ಸಹಜ , ಎಷ್ಟೋ ಜನರು ತಮ್ಮಂತೇ ವಿವಿಧ ಕಷ್ಟ, ನೋವು ಅನುಭವಿಸುವವರಿದ್ದಾರೆ ಎಂಬುದನ್ನು ಅರಿತುಕೊಳ್ಳದೇ ದುಡುಕಿನ ನಿರ್ಧಾರ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇದೇನು ಸಾಧನೆಯೇ? ಬದುಕಿ ತೋರಿಸಿ. ಅದೇ ದೊಡ್ಡ ಸಾಧನೆ. ಬದುಕಿನ ದಾರಿಯಲ್ಲಿ ಏನಾದರೂ ಸಾಧನೆ ಆಕಸ್ಮಿಕವಾಗಿ ಆಗಬಹುದು. ಆಶಾಭಾವನೆ ಇರಲಿ…

Advertisement

LEAVE A REPLY

Please enter your comment!
Please enter your name here