ಆರು ವರ್ಷಗಳ ಬಳಿಕ ತೆರೆದ ನಾಥುಲಾ ಗಡಿ; ಭಾರತ-ಚೀನಾ ಗಡಿ ವ್ಯಾಪಾರಕ್ಕೆ ಮರುಜೀವ

0
3

ಗುವಾಹಟಿ, ಆ.05: ಕೋವಿಡ್-19 ಮಹಾಮಾರಿ ಹಾಗೂ ಭಾರತ-ಚೀನಾ ಗಡಿ ಉದ್ವಿಗ್ನತೆಯಿಂದ ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ಸಿಕ್ಕಿಂನ ನಾಥುಲಾ ಗಡಿ ಮಾರ್ಗದ ವ್ಯಾಪಾರ ಶನಿವಾರದಿಂದ ಪುನರಾರಂಭಗೊಂಡಿದೆ. ವಿಶೇಷ ಉದ್ಘಾಟನಾ ಸಮಾರಂಭದಲ್ಲಿ ಸಿಕ್ಕಿಂನ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ತ್ಸೆರಿಂಗ್ ಟಿ. ಭುಟಿಯಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಭುಟಿಯಾ, ನಾಥುಲಾ ಗಡಿ ವ್ಯಾಪಾರದ ಪುನರಾರಂಭವನ್ನು ʼಐತಿಹಾಸಿಕ ಕ್ಷಣʼ ಎಂದು ಬಣ್ಣಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪ್ರಯತ್ನಗಳಿಂದಲೇ ಚೀನಾದೊಂದಿಗೆ ಗಡಿ ವ್ಯಾಪಾರ ಮತ್ತೆ ಆರಂಭಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

ನಾಥುಲಾ ಗಡಿ ವ್ಯಾಪಾರವು ಪ್ರತಿ ವಾರ ಸೋಮವಾರದಿಂದ ಗುರುವಾರದವರೆಗೆ ನಡೆಯಲಿದ್ದು, ನವೆಂಬರ್‌ವರೆಗೆ ಮುಂದುವರಿಯಲಿದೆ. ಗಡಿ ವ್ಯಾಪಾರದ ಪುನರಾರಂಭದಿಂದ ನೋಂದಾಯಿತ ವ್ಯಾಪಾರಿಗಳು, ಸಾರಿಗೆ ನಿರ್ವಾಹಕರು ಹಾಗೂ ಗಡಿ ವ್ಯಾಪಾರವನ್ನು ಅವಲಂಬಿಸಿರುವ ಸಾವಿರಾರು ಮಂದಿಗೆ ಹೊಸ ಉದ್ಯಮಾವಕಾಶಗಳು ಲಭಿಸುವುದರ ಜೊತೆಗೆ ಸ್ಥಳೀಯ ಆರ್ಥಿಕತೆಗೆ ಹೊಸ ಚೈತನ್ಯ ದೊರೆಯುವ ನಿರೀಕ್ಷೆಯಿದೆ.

ಪ್ರಸ್ತುತ ಭಾರತ ಮತ್ತು ಚೀನಾ ನಡುವೆ ಸುಮಾರು 35 ವಸ್ತುಗಳ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ವ್ಯಾಪಾರಕ್ಕೆ ಅನುಮತಿಸಲಾದ ವಸ್ತುಗಳ ಪಟ್ಟಿಯನ್ನು ಇನ್ನಷ್ಟು ವಿಸ್ತರಿಸುವಂತೆ ವಿದೇಶಿ ವ್ಯಾಪಾರ ಮಹಾನಿರ್ದೇಶಕರಿಗೆ ಸಿಕ್ಕಿಂ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ ಎಂದು ಸಚಿವ ಭುಟಿಯಾ ಮಾಹಿತಿ ನೀಡಿದರು.

ನಾಥುಲಾ ಗಡಿ ವ್ಯಾಪಾರ ಒಪ್ಪಂದದಡಿ ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳು, ಸಾಂಪ್ರದಾಯಿಕ ಧಾರ್ಮಿಕ ವಸ್ತುಗಳು ಹಾಗೂ ಸಿದ್ಧ ಉಡುಪುಗಳ ಸೇರಿದಂತೆ ವಿವಿಧ ವಸ್ತುಗಳ ಆಮದು-ರಫ್ತಿಗೆ ಅವಕಾಶ ಕಲ್ಪಿಸಲಾಗಿದೆ. ಈ ವರ್ಷದ ಗಡಿ ವ್ಯಾಪಾರದಲ್ಲಿ ಪಾಲ್ಗೊಳ್ಳಲು 38 ನೋಂದಾಯಿತ ವ್ಯಾಪಾರಿಗಳಿಗೆ ವಿಶೇಷ ಪಾಸ್‌ಗಳನ್ನು ವಿತರಿಸಲಾಗಿದೆ.

ಭಾರತ-ಚೀನಾ ನಡುವಿನ ನಾಥುಲಾ ಗಡಿ ವ್ಯಾಪಾರದ ಪುನರಾರಂಭವು ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳಿಗೆ ಹೊಸ ಉತ್ತೇಜನ ನೀಡುವುದರ ಜೊತೆಗೆ ಗಡಿ ಪ್ರದೇಶದ ಆರ್ಥಿಕ ಅಭಿವೃದ್ಧಿಗೂ ವೇಗ ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here