ಕೊಚ್ಚಿ, ಜೂ. 7: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲಯಾಳಂ ನಟ ಹಾಗೂ ನಿರ್ದೇಶಕ ಸಲೀಂ ಕುಮಾರ್ ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ವೆಂಟಿಲೇಟರ್ ಬೆಂಬಲದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಶನಿವಾರ ರಾತ್ರಿ ತೀವ್ರ ಹೃದಯಾಘಾತ ಸಂಭವಿಸಿದ ಪರಿಣಾಮ ಅವರು ಕೊನೆಯುಸಿರೆಳೆದಿದ್ದಾರೆ.
ಸಲೀಂ ಕುಮಾರ್ ಅವರು ಕಳೆದ ಹಲವು ವರ್ಷಗಳಿಂದ ವಿವಿಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರಿಗೆ ಯಕೃತ್ತಿನ ಸಿರೋಸಿಸ್, ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು ಹಾಗೂ ದೀರ್ಘಕಾಲದ ಉಸಿರಾಟದ ತೊಂದರೆ (ಸಿಒಪಿಡಿ) ಇತ್ತು. ಯಕೃತ್ತಿನ ಸಿರೋಸಿಸ್‌ನಿಂದ ಬಳಲುತ್ತಿದ್ದ ಕಾರಣ ಹಲವು ವರ್ಷಗಳ ಹಿಂದೆ ಅವರು ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯನ್ನೂ ಪಡೆದಿದ್ದರು.
ಆರೋಗ್ಯದಲ್ಲಿ ಏಕಾಏಕಿ ಹಿನ್ನಡೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಮುಂದುವರಿದಿದ್ದರೂ, ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ವಿಶಿಷ್ಟ ಹಾಸ್ಯ ಅಭಿನಯ, ಭಾವನಾತ್ಮಕ ಪಾತ್ರಗಳು ಹಾಗೂ ಸಾಮಾಜಿಕ ವಿಷಯಗಳ ಕುರಿತ ಸ್ಪಷ್ಟ ನಿಲುವಿನಿಂದ ಸಲೀಂ ಕುಮಾರ್ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ನಿಧನದಿಂದ ಮಲಯಾಳಂ ಚಿತ್ರರಂಗ ಮಾತ್ರವಲ್ಲದೆ ವಿಶ್ವದಾದ್ಯಂತದ ಅಭಿಮಾನಿಗಳು ತೀವ್ರ ದುಃಖಕ್ಕೊಳಗಾಗಿದ್ದಾರೆ. ಹಲವು ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಹಿರಿಯ ಕಲಾವಿದರ ಅಗಲಿಕೆಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.




