ನವದೆಹಲಿ, ಏ.21: ಜಾಗತಿಕ ಪರಿಸ್ಥಿತಿಗಳ ಅನಿಶ್ಚಿತತೆಯ ನಡುವೆ ಪ್ರಯಾಣಿಕರಿಗೆ ನೆರವಾಗುವ ಉದ್ದೇಶದಿಂದ, ಪ್ರಯಾಣ ಸೇವಾ ಸಂಸ್ಥೆ ಥಾಮಸ್ ಕುಕ್ (ಭಾರತ) ಮತ್ತು ಅದರ ಅಂಗ ಸಂಸ್ಥೆ ಎಸ್‌ಒಟಿಸಿ ಟ್ರಾವೆಲ್ ಸಂಸ್ಥೆಗಳು ಸೋಮವಾರ ವೀಸಾ ತಿರಸ್ಕಾರದ ವಿರುದ್ಧ ವಿಮಾ ಸೌಲಭ್ಯವನ್ನು ಪರಿಚಯಿಸಿವೆ.
ಈ ಹೊಸ ಸೌಲಭ್ಯದಡಿ, ವಲಸೆ ಹಾಗೂ ಉದ್ಯೋಗ ವೀಸಾಗಳನ್ನು ಹೊರತುಪಡಿಸಿ ಇತರ ವೀಸಾ ಅರ್ಜಿಗಳು ತಿರಸ್ಕೃತವಾದಲ್ಲಿ, ಗ್ರಾಹಕರು ವಸತಿ ಮತ್ತು ಪ್ರಯಾಣಕ್ಕಾಗಿ ಮುಂಗಡವಾಗಿ ಪಾವತಿಸಿದ ಮರುಪಡೆಯಲಾಗದ ಮೊತ್ತಗಳಿಗೆ ಪರಿಹಾರ ಪಡೆಯಲಿದ್ದಾರೆ. ಇದರಲ್ಲಿ ಅನ್ವಯವಾಗುವ ಅಧಿಕೃತ ರದ್ದತಿ ಶುಲ್ಕಗಳೂ ಸೇರಿವೆ.
ವೀಸಾ ತಿರಸ್ಕಾರದಿಂದ ರದ್ದಾಗುವ ಪ್ರವಾಸಗಳಿಗೆ ಈ ವಿಮೆ ಅನ್ವಯವಾಗಲಿದ್ದು, ಗುಂಪು ಪ್ರವಾಸಗಳು, ಸಭೆಗಳು, ಪ್ರೋತ್ಸಾಹಕ ಕಾರ್ಯಕ್ರಮಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳು ಸೇರಿದಂತೆ ಕಾರ್ಪೊರೇಟ್ ಪ್ರಯಾಣಗಳನ್ನೂ ಒಳಗೊಂಡಿದೆ. ಈ ವಿಮಾ ಯೋಜನೆಯನ್ನು ಐಸಿಐಸಿಐ ಲೊಂಬಾರ್ಡ್ ಸಂಸ್ಥೆ ಅಂಡರ್‌ರೈಟ್ ಮಾಡುತ್ತಿದೆ.
ವೀಸಾ ನಿರಾಕರಣೆಯಿಂದ ಉಂಟಾಗುವ ಮರುಪಾವತಿಸಲಾಗದ ನಷ್ಟಗಳ ಬಗ್ಗೆ ಗ್ರಾಹಕರಲ್ಲಿ ದೀರ್ಘಕಾಲದಿಂದ ವ್ಯಕ್ತವಾಗುತ್ತಿದ್ದ ಆತಂಕಗಳಿಗೆ ಪ್ರತಿಕ್ರಿಯೆಯಾಗಿ ಈ ಹೊಸ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ಸಂಸ್ಥೆ ತಿಳಿಸಿವೆ.




