ಮಂಡ್ಯ, ಏ.15: ರಾಗಿ ಮುದ್ದೆ ಕೇವಲ ಆಹಾರವಲ್ಲ, ಅದು ಶಕ್ತಿಯ ಮೂಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಮಂಡ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ರಾಗಿ ಮುದ್ದೆಯನ್ನು ಪ್ರಸಿದ್ಧಗೊಳಿಸಿರುವುದನ್ನು ಉಲ್ಲೇಖಿಸಿದ ಮೋದಿ, ಯುವಕರು ರಾಗಿ ಮುದ್ದೆ ಸೇರಿದಂತೆ ನವಧಾನ್ಯಗಳನ್ನು ಹೆಚ್ಚು ಸೇವಿಸಬೇಕು ಎಂದು ಕರೆ ನೀಡಿದರು.
ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಸಂಸ್ಕೃತಿ ಹಾಗೂ ಮಠದ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕರ್ನಾಟಕಕ್ಕೆ ಬರುವುದು ಸದಾ ಸಂತೋಷ ತಂದೀತು. ಇಲ್ಲಿಗೆ ಬಂದಾಗ ಹೊಸ ಪ್ರೇರಣೆ ಸಿಗುತ್ತದೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯಕ್ಕೆ ಬಂದಿರುವುದು ಈ ಭೇಟಿಯನ್ನು ಮತ್ತಷ್ಟು ವಿಶೇಷಗೊಳಿಸಿದೆ ಎಂದು ಮೋದಿ ಹೇಳಿದರು.
ಕರ್ನಾಟಕದ ಮಣ್ಣಿನ ವೈಶಿಷ್ಟ್ಯವನ್ನು ಬಣ್ಣಿಸಿದ ಅವರು, ಈ ಮಣ್ಣು ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡರಲ್ಲೂ ಸಮೃದ್ಧವಾಗಿದೆ ಎಂದರು. ಇಲ್ಲಿ ಆಧ್ಯಾತ್ಮಿಕ ಆಳವೂ ಇದೆ, ತಂತ್ರಜ್ಞಾನದ ಶಕ್ತಿಯೂ ಇದೆ. ಆದಿಚುಂಚನಗಿರಿ ಮಠವು ಸಾವಿರಾರು ವರ್ಷಗಳಿಂದ ಭಾರತೀಯ ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು ಬಂದಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಸ್ಮರಿಸಿದ ಪ್ರಧಾನಿ, ಅವರು ಕೇವಲ ಆಧ್ಯಾತ್ಮಿಕ ಮಾರ್ಗದರ್ಶಕರಷ್ಟೇ ಅಲ್ಲ, ಸಮಾಜಮುಖಿ ಚಿಂತನೆ ಹೊಂದಿದ ಮಹಾನ್ ವ್ಯಕ್ತಿ ಎಂದು ಹೇಳಿದರು. ಗ್ರಾಮೀಣ ಯುವಕರ ಆಸೆ-ಆಕಾಂಕ್ಷೆಗಳನ್ನು ಅರಿತು, ಶಿಕ್ಷಣದ ಮೂಲಕ ಬಡ ಮಕ್ಕಳಿಗೆ ಅವಕಾಶ ಕಲ್ಪಿಸಿ ಶೈಕ್ಷಣಿಕ ಕ್ರಾಂತಿಗೆ ಕಾರಣರಾದರು ಎಂದು ಕೊಂಡಾಡಿದರು.
ಆರೋಗ್ಯಕರ ಜೀವನಶೈಲಿ ಬಗ್ಗೆ ಸಲಹೆ
ದೈನಂದಿನ ಜೀವನದಲ್ಲಿ ಉತ್ತಮ ಆಹಾರ ಹಾಗೂ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಮೋದಿ ಸಲಹೆ ನೀಡಿದರು. ಊಟದಲ್ಲಿ ಬಳಸುವ ಎಣ್ಣೆಯನ್ನು ಶೇಕಡಾ 10ರಷ್ಟು ಕಡಿಮೆ ಮಾಡಬೇಕು ಎಂದು ತಿಳಿಸಿದರು. ಜೊತೆಗೆ, ದೇಶೀಯ ಪ್ರವಾಸೋದ್ಯಮ, ಸ್ವಚ್ಛತೆ ಹಾಗೂ ಆತ್ಮನಿರ್ಭರ ಭಾರತದ ಮಹತ್ವವನ್ನೂ ವಿವರಿಸಿದರು.




