
ಬೆಂಗಳೂರು, ಫೆ.05: ಬಿಎಂಆರ್‌ಸಿಎಲ್ (BMRCL) ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಮತ್ತೊಮ್ಮೆ ದರ ಏರಿಕೆಯ ಹೊರೆ ಹೊರಿಸಿದೆ. ಫೆಬ್ರವರಿ 9ರಿಂದ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರವನ್ನು ಶೇಕಡಾ 5ರಷ್ಟು ಹೆಚ್ಚಿಸಲಾಗಿದೆ ಎಂದು ನಿಗಮ ಅಧಿಕೃತವಾಗಿ ಪ್ರಕಟಿಸಿದೆ.
ಮೆಟ್ರೋ ರೈಲ್ವೇ ಕಾಯ್ದೆ–2002ರ ಅಡಿಯಲ್ಲಿ ರಚಿಸಲಾದ ಫೇರ್ ಫಿಕ್ಸೇಷನ್ ಕಮಿಟಿ (FFC) ಶಿಫಾರಸಿನ ಮೇರೆಗೆ ಈ ದರ ಪರಿಷ್ಕರಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚಗಳನ್ನು ಸರಿದೂಗಿಸುವುದು ಈ ನಿರ್ಧಾರದ ಉದ್ದೇಶ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಪ್ರಯಾಣದ ದೂರಕ್ಕೆ ಅನುಗುಣವಾಗಿ ಕನಿಷ್ಠ 1 ರೂಪಾಯಿಯಿಂದ ಗರಿಷ್ಠ 5 ರೂಪಾಯಿಗಳವರೆಗೆ ಟಿಕೆಟ್ ದರ ಹೆಚ್ಚಳವಾಗಿದೆ. ಹೊಸ ದರಪಟ್ಟಿ ಫೆಬ್ರವರಿ 9ರಿಂದ ಜಾರಿಗೆ ಬರಲಿದೆ.
ಭವಿಷ್ಯದಲ್ಲಿ ಏಕಾಏಕಿ ದೊಡ್ಡ ಪ್ರಮಾಣದ ದರ ಏರಿಕೆಯನ್ನು ತಪ್ಪಿಸುವುದು, ಆರ್ಥಿಕ ಸುಸ್ಥಿರತೆ ಮತ್ತು ಸೇವೆಯ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವುದು ಈ ಸಣ್ಣ ವಾರ್ಷಿಕ ಪರಿಷ್ಕರಣೆಯ ಮುಖ್ಯ ಉದ್ದೇಶ ಎಂದು ನಿಗಮ ತಿಳಿಸಿದೆ. ಹಣದುಬ್ಬರ ಹಾಗೂ ನಿರ್ವಹಣಾ ವೆಚ್ಚಗಳನ್ನು ಹಂತ ಹಂತವಾಗಿ ಸಮತೋಲನಗೊಳಿಸಲು ಈ ಕ್ರಮ ಸಹಕಾರಿಯಾಗಲಿದೆ. ಇದರಿಂದ ಪ್ರಯಾಣಿಕರಿಗೆ ತೀವ್ರ ದರ ಏರಿಕೆಯ ಹೊರೆ ತಪ್ಪಲಿದೆ ಎಂಬ ವಿಶ್ವಾಸವನ್ನು ನಿಗಮ ವ್ಯಕ್ತಪಡಿಸಿದೆ.
ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ, ಸಮಯಪ್ರಜ್ಞೆಯ ಮತ್ತು ಕೈಗೆಟುಕುವ ಮೆಟ್ರೋ ಸೇವೆಗಳನ್ನು ಒದಗಿಸಲು ನಿಗಮ ಬದ್ಧವಾಗಿದೆ. ವಿಸ್ತರಿಸುತ್ತಿರುವ ಮೆಟ್ರೋ ಜಾಲದಲ್ಲಿ ಉನ್ನತ ಗುಣಮಟ್ಟದ ಸೇವೆ, ಸುರಕ್ಷತೆ ಹಾಗೂ ಸಮರ್ಪಕ ನಿರ್ವಹಣೆಯನ್ನು ಕಾಪಾಡಿಕೊಳ್ಳುವ ಪ್ರಯತ್ನ ಮುಂದುವರಿಯಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.





