
ಬೆಂಗಳೂರು, ಜ.27: ಮುಂಬರುವ ಬೇಸಿಗೆಯಲ್ಲಿ ರಾಜ್ಯದ ಹಲವೆಡೆ ವಿಪರೀತ ಬಿಸಿಲು ಆವರಿಸುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಸುಮಾರು 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ನಿರೀಕ್ಷೆಯಿದೆ. ಫೆಬ್ರವರಿ 15ರಿಂದಲೇ ತಾಪಮಾನ ಕ್ರಮೇಣ ಏರಿಕೆಯಾಗಲಿದ್ದು, ಈ ಬಾರಿ ಬೇಸಿಗೆಯ ಆರಂಭಕ್ಕೂ ಮುನ್ನವೇ ಅದರ ಅರಿವಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಬಿಸಿ ಮತ್ತು ಆರ್ದ್ರತೆಯ ಪರಿಸ್ಥಿತಿಯೊಂದಿಗೆ ಬೇಸಿಗೆ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ತಾಪಮಾನವು 28 ಡಿಗ್ರಿ ಸೆಲ್ಸಿಯಸ್‌ನಿಂದ 43 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳು ಹೆಚ್ಚಿನ ಆರ್ದ್ರತೆಯನ್ನು ಅನುಭವಿಸಲಿದ್ದು, ಉತ್ತರ ಒಳಾಂಗಣ ಪ್ರದೇಶಗಳು ತೀವ್ರ ಶಾಖದ ಹೊಡೆತಕ್ಕೆ ಒಳಗಾಗುವ ಸಾಧ್ಯತೆ ಇದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳಾಂಗಣ ಕರ್ನಾಟಕದ ಕೆಲ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಸುಮಾರು 1 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನ ದಾಖಲಾಗಬಹುದು. ಇನ್ನು ಕರಾವಳಿ ಮತ್ತು ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ 2 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ಏರಿಕೆ ಕಂಡುಬರುವ ಸಾಧ್ಯತೆ ಇದೆ. ಕೆಲ ತೀವ್ರ ಸಂದರ್ಭಗಳಲ್ಲಿ ಈ ಏರಿಕೆ 4 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರದ (KSNDMC) ಮಾಜಿ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ಅವರು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.
ಭಾರತ ಹವಾಮಾನ ಇಲಾಖೆ (IMD)ಯ ಪ್ರಾಥಮಿಕ ವರದಿಯ ಪ್ರಕಾರ, ಈ ವರ್ಷ ಇಡೀ ದೇಶದಲ್ಲೇ ಬೇಸಿಗೆಯ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಲಿದೆ. ಕರ್ನಾಟಕದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಶೇಷವಾಗಿ ಕಲ್ಯಾಣ-ಕರ್ನಾಟಕ ಪ್ರದೇಶಗಳಾದ ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳು ಹಾಗೂ ಕಿತ್ತೂರು-ಕರ್ನಾಟಕದ ಕೆಲವು ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 1ರಿಂದ 2 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಇನ್ನು ಮಳೆಯ ಕುರಿತು ಮಾತನಾಡಿದ ತಜ್ಞರು, ರಾಜ್ಯದಲ್ಲಿ ಮಾರ್ಚ್ ತಿಂಗಳಲ್ಲಿ ಸರಾಸರಿ 8 ಮಿಮೀ ಹಾಗೂ ಏಪ್ರಿಲ್‌ನಲ್ಲಿ 36 ಮಿಮೀ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಶಾಖ ತೀವ್ರಗೊಳ್ಳುತ್ತಿದ್ದಂತೆ ಮಾರ್ಚ್ ಆರಂಭದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಫೆಬ್ರವರಿಯ ಎರಡನೇ ವಾರದ ವೇಳೆಗೆ ಬೇಸಿಗೆಯ ಆರಂಭದಲ್ಲೇ ಮಳೆಯ ಸನ್ನಿವೇಶಗಳು ಕಾಣಿಸಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.





