ಬಾಂಗ್ಲಾದೇಶಕ್ಕೆ ಖಡಕ್‌ ಎಚ್ಚರಿಕೆ; ಟಿ20 ವಿಶ್ವಕಪ್‌ ನಲ್ಲಿ ಭಾಗವಹಿಸುವ ನಿರ್ಧಾರಕ್ಕೆ ಐಸಿಸಿಯಿಂದ 24 ಗಂಟೆಯ ಗಡುವು!

0
24
Advertisement

ನವದೆಹಲಿ, ಜ.21: 2026ರ ಟಿ20 ವಿಶ್ವಕಪ್‌ ಆರಂಭಕ್ಕೂ ಮುನ್ನವೇ ಉದ್ಭವಿಸಿರುವ ವಿವಾದಕ್ಕೆ ಸಂಬಂಧಿಸಿ ಬುಧವಾರ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಸಭೆಯಲ್ಲಿ ಬಾಂಗ್ಲಾದೇಶಕ್ಕೆ ಅಂತಿಮ ಗಡುವು ವಿಧಿಸಲಾಗಿದೆ. ಭಾರತದಲ್ಲಿ ಪಂದ್ಯಗಳನ್ನು ಆಡಲು ಒಪ್ಪಿಕೊಳ್ಳುವುದು ಅಥವಾ ಟೂರ್ನಿಯಿಂದ ಹೊರನಡೆಯುವುದರ ಬಗ್ಗೆ ಒಂದನ್ನು 24 ಗಂಟೆಗಳೊಳಗೆ ನಿರ್ಧರಿಸಬೇಕೆಂದು ಐಸಿಸಿ ಸೂಚಿಸಿದೆ.

ಭದ್ರತಾ ಕಳವಳಗಳನ್ನು ಉಲ್ಲೇಖಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತನ್ನ ಪಂದ್ಯಗಳನ್ನು ಭಾರತದಿಂದ  ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿತ್ತು. ಆದರೆ ಈ ಬೇಡಿಕೆಯನ್ನು ಐಸಿಸಿ ಮಂಡಳಿ ತಿರಸ್ಕರಿಸಿದ್ದು, ನಿಗದಿತ ವೇಳಾಪಟ್ಟಿಯಂತೆ ಭಾರತದಲ್ಲೇ ಪಂದ್ಯಗಳು ನಡೆಯಬೇಕೆಂದು ಸ್ಪಷ್ಟಪಡಿಸಿದೆ.

ಐಸಿಸಿ ಅಧ್ಯಕ್ಷ ಜಯ್‌ ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಪೂರ್ಣ ಸದಸ್ಯ ರಾಷ್ಟ್ರಗಳ ನಿರ್ದೇಶಕರು ಪಾಲ್ಗೊಂಡಿದ್ದರು. ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಂ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಎಸ್‌ಎಲ್‌ಸಿ ಅಧ್ಯಕ್ಷ ಶಮ್ಮಿ ಸಿಲ್ವಾ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸೇರಿದಂತೆ ವಿವಿಧ ದೇಶಗಳ ಕ್ರಿಕೆಟ್ ಮಂಡಳಿ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಬಳಿಕ ಐಸಿಸಿ ಸ್ಪಷ್ಟ ಎಚ್ಚರಿಕೆ ನೀಡಿದ್ದು, ಬಾಂಗ್ಲಾದೇಶ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದರೆ ಟಿ20 ವಿಶ್ವಕಪ್‌ನಲ್ಲಿ ಬದಲಿ ತಂಡವನ್ನು ಸೇರಿಸಲಾಗುವುದು ಎಂದು ತಿಳಿಸಿದೆ. ಈ ನಿರ್ಧಾರವನ್ನು ಮತದಾನದ ಮೂಲಕ ಕೈಗೊಳ್ಳಲಾಗಿದ್ದು, ಮಂಡಳಿಯ ಬಹುಪಾಲು ಸದಸ್ಯರು ಬದಲಿ ತಂಡದ ಪರವಾಗಿ ಮತ ಚಲಾಯಿಸಿದ್ದಾರೆ. ಐಸಿಸಿಯ ನಿಲುವಿಗೆ ಪ್ರತಿಕ್ರಿಯಿಸಲು ಬಿಸಿಬಿಗೆ ಇನ್ನೂ ಒಂದು ದಿನದ ಕಾಲಾವಕಾಶ ನೀಡಲಾಗಿದೆ.

ಪ್ರಸ್ತುತ ವೇಳಾಪಟ್ಟಿಯ ಪ್ರಕಾರ, ಬಾಂಗ್ಲಾದೇಶ ತನ್ನ ಲೀಗ್ ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಆಡಬೇಕಿದೆ. ಫೆಬ್ರವರಿ 7ರಂದು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಪಂದ್ಯ ನಡೆಯಲಿದ್ದು, ನಂತರ ಅದೇ ನಗರದಲ್ಲಿ ಇನ್ನೆರಡು ಗುಂಪು ಪಂದ್ಯಗಳು ನಡೆಯಲಿವೆ. ಅಂತಿಮ ಲೀಗ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ

Advertisement

LEAVE A REPLY

Please enter your comment!
Please enter your name here