
ಟೆಹ್ರಾನ್, ಜ.10: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಇರಾನ್‌ನಲ್ಲಿ ಸರ್ಕಾರದ ವಿರುದ್ಧ ಜನಾಕ್ರೋಶ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆಗಳು 13ನೇ ದಿನಕ್ಕೂ ಕಾಲಿಟ್ಟಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸರ್ಕಾರ ದೇಶಾದ್ಯಂತ ಇಂಟರ್ನೆಟ್ ಹಾಗೂ ದೂರವಾಣಿ ಸಂಪರ್ಕವನ್ನು ಸ್ಥಗಿತಗೊಳಿಸಿದ್ದರೂ, ಉದ್ವಿಗ್ನತೆ ತಣ್ಣಗಾಗಿಲ್ಲ. ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ನಡೆಸಿದ ಗುಂಡಿನ ದಾಳಿಯಿಂದ ಪರಿಸ್ಥಿತಿ ಮತ್ತಷ್ಟು ಭೀಕರಗೊಂಡಿದ್ದು, ಸಾವಿನ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.
ಸ್ಥಳೀಯ ವರದಿಗಳ ಪ್ರಕಾರ, ರಾಜಧಾನಿ ಟೆಹ್ರಾನ್‌ನ ವಿವಿಧ ಆಸ್ಪತ್ರೆಗಳಲ್ಲಿ ಇದುವರೆಗೆ ಕನಿಷ್ಠ 200ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಹೆಚ್ಚಿನ ಸಾವುಗಳು ಗುಂಡಿನ ದಾಳಿಯಿಂದ ಸಂಭವಿಸಿದ್ದಾಗಿ ತಿಳಿದುಬಂದಿದೆ. ಉತ್ತರ ಟೆಹ್ರಾನ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಭದ್ರತಾ ಪಡೆಗಳು ಏಕಾಏಕಿ ಗುಂಡಿನ ಮಳೆ ಸುರಿಸಿದ್ದು, 30ಕ್ಕೂ ಹೆಚ್ಚು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಡಿ.28ರಂದು ಟೆಹ್ರಾನ್‌ನಲ್ಲಿ ಆರಂಭವಾದ ಮುಷ್ಕರ ಆರ್ಥಿಕತೆ ಕುಸಿತದ ಹಿನ್ನೆಲೆ ತೀವ್ರಗೊಂಡಿದ್ದು, ಇದೀಗ ದೇಶವ್ಯಾಪಿ ಪ್ರತಿಭಟನೆಗಳಾಗಿ ರೂಪುಗೊಂಡಿದೆ. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ‘ಸರ್ವಾಧಿಕಾರಿಗೆ ಸಾವಾಗಲಿ’ ಹಾಗೂ ‘ಖಮೇನಿ ನಾಶವಾಗಲಿ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇಂಟರ್ನೆಟ್ ಸ್ಥಗಿತದ ನಡುವೆಯೂ ಹೋರಾಟಗಳು ಮುಂದುವರೆದಿರುವುದು ಸರ್ಕಾರಕ್ಕೆ ತಲೆನೋವಾಗಿಯೇ ಪರಿಣಮಿಸಿದೆ.

ಈ ನಡುವೆ, ಇರಾನ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಹಿಂಸಾತ್ಮಕ ಕ್ರಮ ಕೈಗೊಂಡರೆ ಅಮೆರಿಕಾ ಮಧ್ಯಪ್ರವೇಶಿಸಿ ರಕ್ಷಣೆಗೆ ಮುಂದಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದು, ಯುದ್ಧಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಇರಾನ್‌ನ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ, ಟ್ರಂಪ್ ವಿರುದ್ಧ ಕಿಡಿಕಾರಿದ್ದು, “ನಿಮ್ಮ ದೇಶದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿ, ಬೇರೆ ದೇಶಗಳ ಆಡಳಿತದಲ್ಲಿ ಕೈಹಾಕಬೇಡಿ” ಎಂದು ಎಚ್ಚರಿಸಿದರು.
ವಿದೇಶಿ ಬೆಂಬಲಿತ ಪ್ರತಿಭಟನೆಗಳು ಅಥವಾ ಭಯೋತ್ಪಾದಕ ಏಜೆಂಟ್‌ಗಳನ್ನು ಇರಾನ್ ಸಹಿಸುವುದಿಲ್ಲ ಎಂದು ಖಮೇನಿ ಸ್ಪಷ್ಟಪಡಿಸಿದರು. ಕೆಲವು ಗಲಭೆಕೋರರು ಸರ್ಕಾರಿ ಆಸ್ತಿಗೆ ಹಾನಿ ಮಾಡುವ ಮೂಲಕ ಟ್ರಂಪ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇರಾನ್ ಯಾವುದೇ ವಿದೇಶಿ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದರು. ಇದೇ ವೇಳೆ, ಇರಾನ್ ಯುವಕರು ದೇಶದ ಪರವಾಗಿ ಒಂದಾಗಿ ನಿಲ್ಲಬೇಕು, ಬಾಹ್ಯ ಒತ್ತಡಗಳಿಗೆ ಮಣಿಯದೆ ಏಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಅಮೆರಿಕ ಅಧ್ಯಕ್ಷರ ಕೈಗಳು ಸಾವಿರಕ್ಕೂ ಹೆಚ್ಚು ಇರಾನಿಯನ್ನರ ರಕ್ತದ ಕಲೆಗಳಿಂದ ಕೂಡಿವೆ ಎಂದು ಆರೋಪಿಸಿದ ಖಮೇನಿ, ಕಳೆದ ಜೂನ್‌ನಲ್ಲಿ ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಉಲ್ಲೇಖಿಸಿದರು. ಆ ದಾಳಿಯಲ್ಲಿ ಸಾವಿರಕ್ಕೂ ಹೆಚ್ಚು ಇರಾನಿ ನಾಗರಿಕರು ಸಾವಿಗೀಡಾಗಿದ್ದರು ಎಂದು ಹೇಳಿದರು. ಪ್ರತಿಭಟನಾಕಾರರು ಅಮೆರಿಕದ ಅಧ್ಯಕ್ಷರನ್ನು ಸಂತೃಪ್ತಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮುಂದಿಟ್ಟರು.
ಒಟ್ಟಿನಲ್ಲಿ, ಆರ್ಥಿಕ ಬಿಕ್ಕಟ್ಟು, ಜನಾಕ್ರೋಶ, ಭದ್ರತಾ ಕ್ರಮಗಳು ಹಾಗೂ ಅಂತರರಾಷ್ಟ್ರೀಯ ರಾಜಕೀಯ ಒತ್ತಡಗಳ ನಡುವೆಯೇ ಇರಾನ್ ಗಂಭೀರ ಅಸ್ಥಿರತೆಯನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ದಿಕ್ಕು ತಾಳಲಿದೆ ಎಂಬುದು ಕುತೂಹಲ ಮೂಡಿಸಿದೆ.





