ಜನಗಣತಿ–2027ಕ್ಕೆ ಅಧಿಕೃತ ಚಾಲನೆ: ಏಪ್ರಿಲ್ 1 ರಿಂದ ಮನೆ ಪಟ್ಟಿ ಕಾರ್ಯ ಆರಂಭ!

0
24
Advertisement

ನವದೆಹಲಿ, ಜ.08: ಭಾರತದ 16ನೇ ರಾಷ್ಟ್ರೀಯ ಜನಗಣತಿ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಜನಗಣತಿ–2027 ಅನ್ನು ಎರಡು ಹಂತಗಳಲ್ಲಿ ನಡೆಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಬುಧವಾರ ಹೊರಡಿಸಿದ ಅಧಿಸೂಚನೆಯಂತೆ, ಜನಗಣತಿಯ ಮೊದಲ ಹಂತವಾದ ಮನೆ ಪಟ್ಟಿ ಮತ್ತು ವಸತಿ ಗಣತಿ ಕಾರ್ಯವು ಏಪ್ರಿಲ್ 1 ರಿಂದ ಸೆಪ್ಟೆಂಬರ್ 30, 2026 ರವರೆಗೆ ದೇಶಾದ್ಯಂತ ನಡೆಯಲಿದೆ.

ಮೊದಲ ಹಂತದಲ್ಲಿ ಮನೆಗಳ ಸಂಖ್ಯೆ, ವಸತಿ ಸ್ಥಿತಿ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಇದು ಜನಸಂಖ್ಯೆಯ ಎಣಿಕೆ ಅಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನಂತರದ ಎರಡನೇ ಹಂತವಾದ ಜನಸಂಖ್ಯಾ ಗಣತಿ (Population Enumeration) ಅನ್ನು ಫೆಬ್ರವರಿ 2027 ರಲ್ಲಿ ನಡೆಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಹಿಮಾವೃತ ಪ್ರದೇಶಗಳಲ್ಲಿ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್ 2026 ರಲ್ಲಿ ಗಣತಿ ಕಾರ್ಯ ನಡೆಸಲಾಗುವುದು. ಈ ಹಂತದಲ್ಲಿ ಪ್ರತಿಯೊಂದು ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಜನಸಂಖ್ಯಾ, ಸಾಮಾಜಿಕ–ಆರ್ಥಿಕ, ಸಾಂಸ್ಕೃತಿಕ ಸೇರಿದಂತೆ ವಿವಿಧ ವಿವರಗಳನ್ನು ಸಂಗ್ರಹಿಸಲಾಗುತ್ತದೆ.

ಈ ಬೃಹತ್ ಕಾರ್ಯಕ್ಕಾಗಿ ಕೇಂದ್ರ ಸಚಿವ ಸಂಪುಟವು 11,718 ಕೋಟಿ ರೂ.ಗಳ ಬಜೆಟ್ ಅನ್ನು ಈಗಾಗಲೇ ಅನುಮೋದಿಸಿದೆ. ಕೊನೆಯ ರಾಷ್ಟ್ರವ್ಯಾಪಿ ಜನಗಣತಿ 2011ರಲ್ಲಿ ನಡೆದಿದ್ದು, ಕೋವಿಡ್–19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ 2021ರ ಜನಗಣತಿಯನ್ನು ಮುಂದೂಡಲಾಗಿತ್ತು. ಇದೀಗ ಮುಂದಿನ ಜನಗಣತಿ 2027ರಲ್ಲಿ ನಡೆಯಲಿದ್ದು, ಉಲ್ಲೇಖ ದಿನಾಂಕವನ್ನು ಮಾರ್ಚ್ 1, 2027 ಎಂದು ನಿಗದಿಪಡಿಸಲಾಗಿದೆ.

ಜನಗಣತಿ–2027 ಹಲವು ಅಂಶಗಳಲ್ಲಿ ಐತಿಹಾಸಿಕವಾಗಲಿದೆ. ಮೊದಲ ಬಾರಿಗೆ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ದತ್ತಾಂಶ ಸಂಗ್ರಹ ನಡೆಯಲಿದೆ. ಜೊತೆಗೆ ಮನೆ ಪಟ್ಟಿ ಹಂತ ಆರಂಭಕ್ಕೂ ಮುನ್ನ ಸ್ವಯಂ–ಗಣತಿ (Self-enumeration) ವ್ಯವಸ್ಥೆಗೆ ಅವಕಾಶ ನೀಡಲಾಗುವುದು. ಇದರಿಂದ ದತ್ತಾಂಶ ಸಂಗ್ರಹದಲ್ಲಿ ಹೆಚ್ಚಿನ ನಿಖರತೆ ಮತ್ತು ಅನುಕೂಲತೆ ದೊರೆಯಲಿದೆ.

ಈ ಜನಗಣತಿಯ ಪ್ರಮುಖ ಅಂಶವೆಂದರೆ, ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಜಾತಿ ಆಧಾರಿತ ದತ್ತಾಂಶ ಸಂಗ್ರಹ ನಡೆಯಲಿದೆ. ಸುಮಾರು 30 ಲಕ್ಷ ಗಣತಿದಾರರು ಈ ಡಿಜಿಟಲ್ ಜನಗಣತಿಯಲ್ಲಿ ಭಾಗವಹಿಸಲಿದ್ದು, ಸಮಗ್ರ ಜನಸಂಖ್ಯಾ ಮಾಹಿತಿಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ದತ್ತಾಂಶವು ಮುಂದಿನ ದಿನಗಳಲ್ಲಿ ನೀತಿ ನಿರೂಪಣೆ ಮತ್ತು ಸಂಪನ್ಮೂಲ ಹಂಚಿಕೆಗೆ ಮಹತ್ವದ ಆಧಾರವಾಗಲಿದೆ.

ಜನಗಣತಿ–2027 ದೇಶದ 16ನೇ ರಾಷ್ಟ್ರೀಯ ಜನಗಣತಿ ಹಾಗೂ ಸ್ವಾತಂತ್ರ್ಯ ನಂತರದ ಎಂಟನೆಯದು ಆಗಿದ್ದು, ಗ್ರಾಮ, ಪಟ್ಟಣ ಹಾಗೂ ವಾರ್ಡ್ ಮಟ್ಟದ ವಸತಿ, ಸೌಕರ್ಯಗಳು, ಶಿಕ್ಷಣ, ಆರ್ಥಿಕ ಚಟುವಟಿಕೆ, ವಲಸೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಣ್ಣ ಮಟ್ಟದ ಮಾಹಿತಿಯನ್ನು ಒದಗಿಸಲಿದೆ. ಈ ಸಂಪೂರ್ಣ ಪ್ರಕ್ರಿಯೆ ಜನಗಣತಿ ಕಾಯ್ದೆ–1948 ಹಾಗೂ ಜನಗಣತಿ ನಿಯಮಗಳು–1990ರ ಅಡಿಯಲ್ಲಿ ನಡೆಯಲಿದೆ.

Advertisement

LEAVE A REPLY

Please enter your comment!
Please enter your name here