
ಹೊಸದಿಲ್ಲಿ, ಡಿ.22: ಭಾರತೀಯ ರೈಲ್ವೆ ತನ್ನ ಪ್ರಯಾಣ ದರಗಳಲ್ಲಿ ಪರಿಷ್ಕರಣೆ ಮಾಡುವುದಾಗಿ ಘೋಷಿಸಿದ್ದು, ಈ ಹೊಸ ದರ ವ್ಯವಸ್ಥೆ ಡಿಸೆಂಬರ್ 26, 2025 ರಿಂದ ಜಾರಿಗೆ ಬರಲಿದೆ. 215 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸುವ ಸಾಮಾನ್ಯ, ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರಿಗೆ ಈ ದರ ಏರಿಕೆ ಅನ್ವಯವಾಗಲಿದೆ.
ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, 215 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸುವ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಯಾವುದೇ ದರ ಏರಿಕೆ ಇರುವುದಿಲ್ಲ. ಆದರೆ, 215 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸುವವರಿಗೆ ಸಾಮಾನ್ಯ ವರ್ಗದಲ್ಲಿ ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹಾಗೂ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚುವರಿ ದರ ವಿಧಿಸಲಾಗುತ್ತದೆ.
ದರ ಪರಿಷ್ಕರಣೆ ನಾನ್-ಎಸಿ ಹಾಗೂ ಎಸಿ ಎರಡೂ ವಿಭಾಗಗಳಿಗೆ ಅನ್ವಯವಾಗಲಿದೆ. ಉದಾಹರಣೆಗೆ, 500 ಕಿಲೋಮೀಟರ್ ದೂರದ ನಾನ್-ಎಸಿ ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರಸ್ತುತ ದರಕ್ಕಿಂತ ಸುಮಾರು ₹10 ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.
ಇದೇ ವೇಳೆ, ಮಾಸಿಕ ಋತುಮಾನದ ಟಿಕೆಟ್‌ಗಳು (MST) ಹಾಗೂ ಉಪನಗರ ರೈಲುಗಳ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಡಿಮೆ ದೂರದ ಪ್ರಯಾಣಿಕರಿಗೆ ರೈಲು ಸೇವೆಯನ್ನು ಕೈಗೆಟುಕುವಂತೆ ಉಳಿಸುವುದು ಹಾಗೂ ಕಾರ್ಯಾಚರಣಾ ವೆಚ್ಚಗಳನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ಈ ದರ ಹೊಂದಾಣಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ದರ ಏರಿಕೆಯಿಂದ ರೈಲ್ವೆಗೆ ಸುಮಾರು ₹600 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆದಾಯ ಲಭಿಸುವ ನಿರೀಕ್ಷೆಯಿದೆ.





