
ಮಂಗಳೂರು, ಮಾ.12: ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯೆಲ್ಲೋ ಅಲರ್ಟ್ ಘೋಷಿಸಿದೆ.
ರಾಜ್ಯದ ಹಲವಾರು ಜಿಲ್ಲೆಗಳು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುತ್ತಿದ್ದು, ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಕರಾವಳಿ ಭಾಗಗಳಲ್ಲಿ ಬಿಸಿಲಿನ ತೀವ್ರತೆ ಮತ್ತು ಉಷ್ಣತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮಾರ್ಚ್ 11ರಂದು ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಗೆ ಐಎಂಡಿ ಬಿಡುಗಡೆ ಮಾಡಿದ ಅಂಕಿ–ಅಂಶಗಳ ಪ್ರಕಾರ, ಕರ್ನಾಟಕದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 33°C ರಿಂದ 37°C ನಡುವಿನಲ್ಲಿ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ 37°C ತಾಪಮಾನ ದಾಖಲಾಗಿದ್ದು, ಉಡುಪಿಯಲ್ಲಿ 35.8°C ತಾಪಮಾನ ದಾಖಲಾಗಿದೆ. ತುಲನಾತ್ಮಕವಾಗಿ ಕನಿಷ್ಠ ತಾಪಮಾನ 24°C ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ 36.6°C ಮತ್ತು ಕನಿಷ್ಠ 21.2°C ತಾಪಮಾನ ದಾಖಲಾಗಿದೆ.
ಇನ್ನೂ ರಾಜ್ಯದ ಹಲವಾರು ಒಳನಾಡಿನ ಜಿಲ್ಲೆಗಳಲ್ಲಿಯೂ ತಾಪಮಾನ ಹೆಚ್ಚಳ ಕಂಡುಬಂದಿದೆ. ಕಲಬುರ್ಗಿಯಲ್ಲಿ ಗರಿಷ್ಠ 36.6°C, ಹಾವೇರಿಯಲ್ಲಿ 36.4°C ತಾಪಮಾನ ದಾಖಲಾಗಿದೆ. ಬೀದರ್‌ನಲ್ಲಿ 36.3°C ಹಾಗೂ ರಾಯಚೂರಿನಲ್ಲಿ 36.1°C ತಾಪಮಾನ ದಾಖಲಾಗಿದೆ.
ಇದಲ್ಲದೆ ಬಾಗಲಕೋಟೆ (35.9°C), ಬೆಳಗಾವಿ (35.4°C), ಶಿವಮೊಗ್ಗ (35.3°C) ಮತ್ತು ಬಳ್ಳಾರಿ (35°C) ಜಿಲ್ಲೆಗಳಲ್ಲಿಯೂ ಹಗಲಿನ ತಾಪಮಾನ ಏರಿಕೆಯಾಗಿರುವುದು ಕಂಡುಬಂದಿದೆ. ಇದು ರಾಜ್ಯದ ಹಲವಾರು ಭಾಗಗಳಲ್ಲಿ ಬಿಸಿಲಿನ ತೀವ್ರತೆ ಕ್ರಮೇಣ ಹೆಚ್ಚುತ್ತಿರುವುದನ್ನು ಸೂಚಿಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.





