
ಮುಂಬಯಿ, ಫೆ.27: ವಿಮಾನ ದುರಂತದಲ್ಲಿ ಮೃತಪಟ್ಟ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಅವರ ಪುತ್ರ ಪಾರ್ಥ ಪವಾರ್ ಅವರಿಗೆ ಎನ್‌ಸಿಪಿ ರಾಜ್ಯಸಭೆ ಟಿಕೆಟ್ ಘೋಷಿಸಿದೆ.
ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಅವರು ಪಾರ್ಥ ಪವಾರ್ (35) ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು. ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಾರ್ಥ್ ಪವಾರ್ ಅವರ ಹೆಸರು ಅಂತಿಮಗೊಂಡಿದೆ ಎಂದು ತಿಳಿದುಬಂದಿದೆ.
ಮಾರ್ಚ್ 16ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಗೆಲುವಿಗಾಗಿ ಕನಿಷ್ಠ 37 ಶಾಸಕರ ಬೆಂಬಲ ಅಗತ್ಯವಿದೆ. ಆದರೆ ಪ್ರಸ್ತುತ ಎನ್‌ಸಿಪಿಗೆ 40 ಶಾಸಕರ ಬೆಂಬಲ ಇರುವುದರಿಂದ ಪಾರ್ಥ ಪವಾರ್ ಅವರ ಗೆಲುವು ಬಹುತೇಕ ಖಚಿತವಾಗಿದೆ. ಅವರು ಆರು ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ.
ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಪಾರ್ಥ ಪವಾರ್, 2019ರ ಲೋಕಸಭೆ ಚುನಾವಣೆಯಲ್ಲಿ ಮಾವಲ್ ಕ್ಷೇತ್ರದಿಂದ ಸ್ಪರ್ಧಿಸಿ, ಅವಿಭಜಿತ ಶಿವಸೇನಾ ಅಭ್ಯರ್ಥಿ ಶ್ರೀರಂಗ ಬರ್ನೆ ವಿರುದ್ಧ ಸುಮಾರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಪಾರ್ಥ್ ಪವಾರ್ ಅವರನ್ನು ರಾಜ್ಯಸಭೆ ಚುನಾವಣೆಗೆ ಕಣಕ್ಕಿಳಿಸುವ ನಿರ್ಧಾರವನ್ನು ಪಕ್ಷದ ಪ್ರಮುಖ ನಾಯಕರು ಸರ್ವಾನುಮತದಿಂದ ತೆಗೆದುಕೊಂಡಿದ್ದಾರೆ ಎಂದು ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ಈ ನಿರ್ಧಾರದಲ್ಲಿ ಛಗನ್ ಭುಜಬಲ್, ಸುನಿಲ್ ತತ್ಕರೆ, ಹಸನ್ ಮುಶ್ರಿಫ್, ಧನಂಜಯ್ ಮುಂಡೆ ಹಾಗೂ ದಿಲೀಪ್ ವಾಲ್ಸೆ ಪಾಟೀಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದರು ಎಂದು ಐಎಎನ್‌ಎಸ್ ವರದಿ ಮಾಡಿದೆ.





