
ಲೇಖನ: ದೀಪಿಕಾ ಸಂದೀಪ್ ಮಡಿಕೇರಿ
ಕ್ರಿಸ್ಮಸ್ ಹಬ್ಬದ ಸಂಭ್ರಮ ಇನ್ನೂ ತಣ್ಣಗಾಗುವ ಮೊದಲೇ, ಬಿರುಸಾದ ಚಳಿಯ ನಡುವೆಯೂ ಮಡಿಕೇರಿ ನಗರಕ್ಕೆ ಹೊಸ ವರ್ಷದ ಹುರುಪು ಆವರಿಸಿಕೊಂಡಿದೆ. ವರ್ಷಾಂತ್ಯ ಹತ್ತಿರವಾಗುತ್ತಿದ್ದಂತೆ ಪ್ರವಾಸಿಗರು ದಂಡು ದಂಡಾಗಿ ಕೊಡಗಿನತ್ತ ಮುಖ ಮಾಡುತ್ತಿದ್ದು, ಹಸಿರು ಹೊದ್ದಿರುವ ಈ ನಾಡು ಮತ್ತೆ ಜನಸಾಗರದಿಂದ ತುಂಬಿಕೊಳ್ಳುತ್ತಿದೆ.
ಮಡಿಕೇರಿಯ ರಸ್ತೆಗಳಲ್ಲಂತೂ ವಾಹನಗಳ ಭರಾಟೆ ತೀವ್ರವಾಗಿದೆ. ಸಾಮಾನ್ಯವಾಗಿ ಐದು ನಿಮಿಷಗಳಲ್ಲಿ ದಾಟಬಹುದಾದ ದಾರಿಗೂ ಈಗ ಅರ್ಧಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿದೆ. ಅಲ್ಲಲ್ಲಿ ವಾಹನ ದಟ್ಟಣೆ ಕಂಡುಬರುವುದು ಹೊಸದೇನಲ್ಲವಾದರೂ, ಈ ಬಾರಿ ದಿನಪೂರ್ತಿ ಒಂದೇ ರೀತಿಯ ಸಂಚಾರದಟ್ಟಣೆ ಕಂಡುಬಂದಿದ್ದು, ಮಡಿಕೇರಿ ಕೂಡ ಬೆಂಗಳೂರಿನಂಥ ಮಹಾನಗರದ ಜೊತೆ ಮೆಲ್ಲಗೆ ಪೈಪೋಟಿಗೆ ಇಳಿದಂತೆ ಕಾಣುತ್ತಿದೆ. ಈ ಪರಿಸ್ಥಿತಿಯಿಂದ ಸಂಚಾರಿ ಪೊಲೀಸರು ಕೂಡ ಹೈರಾಣಾಗಿದ್ದು, ವಾಹನ ಸಂಚಾರ ಸುಗಮಗೊಳಿಸಲು ಹರಸಾಹಸ ಪಡುತ್ತಿದ್ದಾರೆ.

2025ಕ್ಕೆ ವಿದಾಯ ಹೇಳುವ ಹೊತ್ತಿನಲ್ಲಿ, ಕಳೆದ ವರ್ಷದ ಸುಂದರ ಕ್ಷಣಗಳನ್ನು ನೆನಪಿನ ಪೊಟ್ಟಣದಲ್ಲಿ ಸೇರಿಸಿಕೊಳ್ಳುವ ಧಾವಂತದಲ್ಲಿದ್ದ ಜನರು, ಸ್ವಚ್ಛ–ಸುಂದರ ಹಸಿರು ಮಡಿಲಿನ ಹುಡುಕಾಟದಲ್ಲಿ ಕೊಡಗಿಗೆ ಆಗಮಿಸಿದ್ದಾರೆ. ಪ್ರಕೃತಿ ಸೌಂದರ್ಯ, ತಣ್ಣನೆಯ ವಾತಾವರಣ ಮತ್ತು ಶಾಂತ ಪರಿಸರ ಪ್ರವಾಸಿಗರಿಗೆ ಸಂತೋಷ ತಂದಿದ್ದರೂ, ತುರ್ತು ಸಾಗಬೇಕಾದ ದಾರಿಗೆ ಸಂಚಾರದಟ್ಟಣೆ ಅಡ್ಡಿಯಾದಾಗ ತುಸು ಅಸಮಾಧಾನ ಹೊರಹೊಮ್ಮಿರುವುದು ಸಹಜವೇ.
ಇನ್ನು ಕೆಲವರು, “ಹೊಸ ವರ್ಷದಲ್ಲೇನಿದೆ ವಿಶೇಷ? ಕ್ಯಾಲೆಂಡರ್ ಮಾತ್ರ ಬದಲಾಗುತ್ತದೆ, ಬದುಕು ಎಂದಿನಂತೆ ಸಾಗುತ್ತದೆ” ಎಂದು ಭಾವಿಸುವವರೂ ಇದ್ದಾರೆ. ಆದರೆ ಇವರ ನಡುವೆಯೇ, 2026ನ್ನು ಸ್ವಾಗತಿಸಲು ಬದುಕಿನಲ್ಲಿ ಒಂದಷ್ಟು ಬದಲಾವಣೆಗಳ ಹೊಂಗನಸಿನೊಂದಿಗೆ ಬಂದವರು ಹೆಚ್ಚಾಗಿದ್ದಾರೆ. ಹೊಸ ನಿರೀಕ್ಷೆಗಳು, ಹೊಸ ನಿರ್ಧಾರಗಳು ಮತ್ತು ಹೊಸ ಆರಂಭದ ಕನಸುಗಳು ನಗರದೆಲ್ಲೆಡೆ ಹೊಸತನದ ಸಂಭ್ರಮವನ್ನು ಮೂಡಿಸಿರುವುದರಲ್ಲಿ ಎರಡು ಮಾತಿಲ್ಲ.
ಈ ಎಲ್ಲದರ ನಡುವೆ, ಹೊಸ ವರ್ಷಾಚರಣೆ ಶಾಂತಿಯುತವಾಗಿರಲೆಂದು ಪೊಲೀಸರು ತಮ್ಮ ಕರ್ತವ್ಯ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಜನಸಂದಣಿ, ವಾಹನ ದಟ್ಟಣೆ, ಸುರಕ್ಷತೆ; ಈ ಎಲ್ಲ ಸವಾಲುಗಳ ನಡುವೆಯೂ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಅವರ ಮೇಲಿದೆ. ಸಾರ್ವಜನಿಕರೂ ಸಹ ಸಹಕಾರ ನೀಡಿದರೆ, ಈ ಸಂಭ್ರಮ ಎಲ್ಲರಿಗೂ ನೆನಪಿನಲ್ಲಿರುವ ಕ್ಷಣವಾಗಬಹುದು.
ಒಟ್ಟಿನಲ್ಲಿ, ಹೊಸ ವರ್ಷಾಚರಣೆ ಮತ್ತು ಪ್ರವಾಸಿಗರ ದಟ್ಟಣೆ ಮಡಿಕೇರಿಗೆ ಸಂಭ್ರಮದ ಜೊತೆಗೆ ಸಂಕಷ್ಟವನ್ನೂ ತಂದಿದೆ. ಆದರೆ ಈ ಗದ್ದಲದ ನಡುವೆಯೂ, ಹೊಸ ವರ್ಷದ ಹೊಸ ಕನಸುಗಳು, ಹೊಸ ನಿರೀಕ್ಷೆಗಳು ಮತ್ತು ಹೊಸ ಆರಂಭದ ಉತ್ಸಾಹ ಕೊಡಗಿನ ವಾತಾವರಣವನ್ನು ಇನ್ನಷ್ಟು ಜೀವಂತಗೊಳಿಸಿದೆ.



