ಜಗತ್ತಿನ ಮೇಲೆ ಅಮೆರಿಕದ ಹಿಡಿತ ಬಲವಾಗುತ್ತಿದೆಯೇ?ಟ್ರಂಪ್ ನಡೆಗಳು ಜಾಗತಿಕ ವಸಾಹತುಶಾಹಿಗೆ ಮುನ್ನುಡಿಯೇ?!

0
15
Advertisement

ಲೇಖನ:ಶಿವಪ್ರಸಾದ್ ಮಣಿಯೂರು

ಇತ್ತೀಚಿನ ದಿನಗಳಲ್ಲಿ ಅಮೆರಿಕದ ವಿದೇಶಾಂಗ ಹಾಗೂ ಸೈನಿಕ ನಡೆಗಳು ಜಗತ್ತಿನ ಗಮನ ಸೆಳೆಯುತ್ತಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ, ಆರ್ಥಿಕ ಸುಂಕಗಳು, ಸೈನಿಕ ದಾಳಿಗಳು ಮತ್ತು ವೀಸಾ ನಿರ್ಬಂಧಗಳ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಹೊರಟಿದೆಯೇ ಎಂಬ ಗುಮಾನಿ ಹುಟ್ಟುಹಾಕಿದೆ. ಯಾವುದೇ ಅಂತರಾಷ್ಟ್ರೀಯ ಕಾನೂನುಗಳನ್ನು ಲೆಕ್ಕಿಸದೆ ಅಮೆರಿಕದ ನಡೆಗಳು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಅಮೆರಿಕದ ಆಡಳಿತದ ಕಡೆಗಳಿಂದ ನಡೆದ ಸೈನಿಕ, ಆರ್ಥಿಕ, ಪ್ರವಾಸಿ/ವೀಸಾ ಮತ್ತು ರಾಜಕೀಯ ಕ್ರಮಗಳು ವಿಶ್ವ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ ಅಂದರೆ ತಪ್ಪಾಗಲಾರದು. ಹಾಗಾದ್ರೆ, ಟ್ರಂಪ್ ನಡೆ ನೇರ ವಸಾಹತು ಶಾಹಿಯತ್ತ ಇದೆ ಎಂಬುದನ್ನು ಪುಷ್ಟೀಕರಿಸುವ ಅಂಶಗಳನ್ನು ಗಮನಿಸೋಣ.

ವೆನುಜುವೆಲಾ ತೈಲ ರಾಷ್ಟ್ರದ ಮೇಲೆ ಅಮೆರಿಕದ ಹಿಡಿತ

ಲ್ಯಾಟಿನ್ ಅಮೆರಿಕದ ತೈಲಸಂಪನ್ನ ದೇಶ ವೆನುಜುವೆಲಾದಲ್ಲಿ ಅಧ್ಯಕ್ಷ ನಿಕೊಲಾಸ್ ಮಡುರೋ ವಿರುದ್ಧ ಅಮೆರಿಕ ನೇರ ಕ್ರಮಕ್ಕೆ ಮುಂದಾಗಿ, ಮಡುರೋ ಅವರನ್ನು ವಶಪಡಿಸಿಕೊಂಡಿರುವುದು ಅಲ್ಲಿನ ಆಡಳಿತದಲ್ಲಿ ಅಮೆರಿಕದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆ . ವೆನುಜುವೆಲಾದಲ್ಲಿ ಅಪಾರ ಪ್ರಮಾಣದ ತೈಲ ನಿಕ್ಷೇಪಗಳಿದ್ದು, ಜಾಗತಿಕ ತೈಲ ರಾಜಕಾರಣದಲ್ಲಿ ಈ ದೇಶ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ, ಈ ಕ್ರಮ ಕೇವಲ ರಾಜಕೀಯವಲ್ಲ; ತೈಲದ ಮೇಲೆ ಹಿಡಿತ ಸಾಧಿಸುವ ಯತ್ನವೂ ಹೌದು ಎಂಬ ಅನುಮಾನಗಳು ವ್ಯಕ್ತವಾಗಿವೆ.

ಗ್ರೀನ್‌ಲ್ಯಾಂಡ್ ಮೇಲೆ ನಿಯಂತ್ರಣ

ವೆನುಜುವೆಲಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಟ್ರಂಪ್‌ ಕಣ್ಣು  ಗ್ರೀನ್ ಲ್ಯಾಂಡ್ ಕಡೆ ವಾಲಿದೆ. ಈ ದೇಶದ
ಅಪಾರ ಪ್ರಮಾಣದ ಖನಿಜ ಸಂಪತ್ತು, ತೈಲವನ್ನು ಗುರಿಯಾಗಿಸಿಕೊಂಡು ಟ್ರಂಪ್ ಗ್ರೀನ್ ಲ್ಯಾಂಡ್ ಮೇಲೆ ನಿಯಂತ್ರಣ ಸಾಧಿಸಿದೆ.

ಈ ಕ್ರಮವನ್ನು ವಿರೋಧಿಸಿದ‌ ರಾಷ್ಟಗಳ‌ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಿದೆ. ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಬ್ರಿಟನ್, ನೆದರ್‌ಲ್ಯಾಂಡ್ಸ್ ಮತ್ತು ಫಿನ್‌ಲ್ಯಾಂಡ್ ಸೇರಿ ಹಲವು ಯುರೋಪಿಯನ್ ರಾಷ್ಟ್ರಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ತೆರಿಗೆ (ಟಾರಿಫ್) ಹೇರಲಾಗಿದೆ. ಈ ಹೊಸ ಸುಂಕ ನಿಯಮಗಳು ಫೆಬ್ರವರಿಯಿಂದ ಜಾರಿಗೆ ಬರಲಿವೆ ಎಂದು ಅಮೆರಿಕ ಘೋಷಿಸಿದೆ. ಅಮೆರಿಕದ ನಿರ್ಧಾರಗಳಿಗೆ ವಿರೋಧ ವ್ಯಕ್ತಪಡಿಸುವ ದೇಶಗಳ ಮೇಲೆ ಆರ್ಥಿಕ ದಂಡ ವಿಧಿಸುವ ನೀತಿಯನ್ನು ಟ್ರಂಪ್ ಸರ್ಕಾರ ಅನುಸರಿಸುತ್ತಿದೆ ಎಂಬ ಆರೋಪ  ನಿಜವಾಗುತ್ತಿ‍ದೆ.

ನೈಜೀರಿಯಾ ಮೇಲೆ ಸೈನಿಕ ದಾಳಿ

2025ರ ಡಿಸೆಂಬರ್ 25ರಂದು ನೈಜೀರಿಯಾದ ಸೊಕೊಟೋ ರಾಜ್ಯದಲ್ಲಿ ಐಸಿಸ್ ಮತ್ತು ಲಕುರುವಾ ಉಗ್ರ ಸಂಘಟನೆಗಳಿಗೆ ಸೇರಿದ 16 ನೆಲೆಗಳ ಮೇಲೆ ಅಮೆರಿಕ ವಾಯು ದಾಳಿ ನಡೆಸಿದೆ. ಇದು ನೈಜೀರಿಯಾದಲ್ಲಿ ಅಮೆರಿಕ ನಡೆಸಿದ ಮೊದಲ ಅಧಿಕೃತ ಸೈನಿಕ ಕಾರ್ಯಾಚರಣೆಯಾಗಿದೆ. ಅಮೇರಿಕ ಐಸಿಸ್ ಉಗ್ರರ ಮೇಲೆ ದಾಳಿ ಎಂದು ಹೇಳಿದರೂ ನೈಜಿರಿಯಾ ಸರಕಾರ ಅದನ್ನು ಅಲ್ಲಗೆಳೆದಿದೆ. ದೇಶದಲ್ಲಿ ಅಮೇರಿಕಾದ ಪ್ರಭಾವ ಹೆಚ್ಚಿಸಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದೇ ಆಗಿದೆ ಎಂದು ಹೊರನೋಟದಲ್ಲಿ‌ ಗಮನಿಸಬಹುದು.

ಯೆಮನ್: ರೆಡ್ ಸೀ ರಕ್ಷಣೆಯ ನೆಪದಲ್ಲಿ ಅಮೆರಿಕದ ದಾಳಿ

ಮಧ್ಯಪ್ರಾಚ್ಯದ ಯುದ್ಧಪೀಡಿತ ರಾಷ್ಟ್ರ ಯೆಮನ್‌ನಲ್ಲಿ ಅಮೆರಿಕ ನಡೆಸಿದ ಸೈನಿಕ ದಾಳಿಗಳು ನಡೆಯುತ್ತಲೇ ಇವೆ.
ರೆಡ್ ಸೀ (Red Sea) ಸಮುದ್ರ ಮಾರ್ಗದ ಹಡಗು ಸಂಚಾರ ಮತ್ತು ತೈಲ ಸಾಗಣೆಯ ಭದ್ರತೆಯ ಹೆಸರಿನಲ್ಲಿ ಅಮೆರಿಕ 2025ರ ಆರಂಭದಲ್ಲಿ ‘ಆಪರೇಷನ್ ರಫ್ ರೈಡರ್’ ಎಂಬ ಭಾರಿ ಸೈನಿಕ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಒಂದರ್ಥದಲ್ಲಿ ಯೆಮೆನ್ ದೇಶವನ್ನು ಹಿಡಿತದಲ್ಲಿಟ್ಟುಕೊಳ್ಳುವ ಉದ್ದೇಶ ಅಮೇರಿಕದ್ದು ಅನ್ನಲು ಸ್ಪಷ್ಟ ಉದಾಹರಣೆ ಇದು.

ಸೋಮಾಲಿಯಾ – ನಿರಂತರ ಬಾಂಬ್ ದಾಳಿ

ಆಫ್ರಿಕಾದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಸೋಮಾಲಿಯಾದಲ್ಲಿ ಅಮೆರಿಕದ ಸೈನಿಕ ದಾಳಿಗಳು ಇತ್ತೀಚಿನ ವರ್ಷಗಳಲ್ಲಿ ತೀವ್ರಗೊಂಡಿವೆ. ವಿಶೇಷವಾಗಿ ಅಲ್-ಶಬಾಬ್ ಮತ್ತು ಐಸಿಸ್-ಸೋಮಾಲಿಯಾ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ನಿರಂತರವಾಗಿ ವಾಯು ದಾಳಿಗಳನ್ನು ನಡೆಸುತ್ತಿದೆ. 2025ರ ಒಂದೇ ವರ್ಷದಲ್ಲಿ ಮಾತ್ರ ಅಮೆರಿಕ 120ಕ್ಕೂ ಹೆಚ್ಚು ದಾಳಿಗಳನ್ನು ಸೋಮಾಲಿಯಾದಲ್ಲಿ ನಡೆಸಿರುವುದು ಗಮನಾರ್ಹವಾಗಿದೆ. ಈ ದಾಳಿಗಳಲ್ಲಿ ಉಗ್ರರ ತರಬೇತಿ ಶಿಬಿರಗಳು, ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಗಳು ಮತ್ತು ನಾಯಕರ ಅಡಗುತಾಣಗಳು ಗುರಿಯಾಗಿವೆ.

ಈ ದಾಳಿಗಳು ಜಾಗತಿಕ ಭಯೋತ್ಪಾದನೆಯನ್ನು ತಡೆಗಟ್ಟುವ ಉದ್ದೇಶದಿಂದ ಹಾಗೂ ಆಫ್ರಿಕಾ ಮತ್ತು ಪಶ್ಚಿಮ ದೇಶಗಳ ಭದ್ರತೆಗಾಗಿ ಎಂದು ಅಮೇರಿಕಾ ಹೇಳಿದರೂ,ಆಫ್ರಿಕಾ ಪ್ರದೇಶದಲ್ಲಿ ತನ್ನ ತಂತ್ರಜ್ಞಾನ ಹಾಗೂ ಸೈನಿಕ ಪ್ರಭಾವವನ್ನು ಹೆಚ್ಚಿಸುವುದೇ ಆಗಿದೆ ಎನ್ನಲಾಗುತ್ತಿದೆ

ಭಾರತಕ್ಕೂ ತಟ್ಟಿದ ಸುಂಕದ ಬಿಸಿ

ಜಾಗತಿಕ ಮಟ್ಟದಲ್ಲಿ ಟ್ರಂಪ್‌ ಸರಕಾರ ಹಸ್ತಕ್ಷೇಪ‌ ಮಾಡುತ್ತಿರುವಂತೆ ಅದರ ಬಿಸಿ ಭಾರತಕ್ಕೂ ತಟ್ಟಿದೆ. ‘ಅಮೆರಿಕ ಮೊದಲು’ ಎಂಬ ಘೋಷಣೆಯಡಿ ಜಾರಿಯಾಗುತ್ತಿರುವ ಹೊಸ ಸುಂಕ ನೀತಿಗಳು, ಭಾರತ–ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳಲ್ಲಿ ಹೊಸ ಆತಂಕವನ್ನು ಹುಟ್ಟಿಸಿವೆ.

ಇತ್ತೀಚೆಗೆ ಅಮೆರಿಕವು ಕೆಲವು ಭಾರತೀಯ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ (ಟಾರಿಫ್) ವಿಧಿಸಿದ್ದು, ಇದರಿಂದ ಭಾರತೀಯ ರಫ್ತು ಕ್ಷೇತ್ರಕ್ಕೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚಾಗಿದೆ. ವಿಶೇಷವಾಗಿ ಉಕ್ಕು, ಅಲ್ಯೂಮಿನಿಯಂ, ಕೈಗಾರಿಕಾ ಭಾಗಗಳು, ಔಷಧ ಉತ್ಪನ್ನಗಳು ಮತ್ತು ಕೆಲವು ಕೃಷಿ ಉತ್ಪನ್ನಗಳು ಈ ಸುಂಕದ ವ್ಯಾಪ್ತಿಗೆ ಬಿದ್ದಿವೆ ಎನ್ನಲಾಗಿದೆ.

75 ದೇಶಗಳ ವೀಸಾಗೆ ಬ್ರೇಕ್!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಜಾಗತಿಕ ಮಟ್ಟದಲ್ಲಿ ಮತ್ತೊಂದು ಕಠಿಣ ನಿರ್ಧಾರ ಕೈಗೊಂಡಿದೆ. ಅಮೆರಿಕವು 75 ದೇಶಗಳ ವಲಸೆ (Immigrant) ವೀಸಾ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದೆ. ಈ ನಿರ್ಧಾರದಿಂದ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಪೂರ್ವ ಯುರೋಪಿನ ಅನೇಕ ರಾಷ್ಟ್ರಗಳು ತೀವ್ರವಾಗಿ ಪ್ರಭಾವಿತವಾಗಿವೆ.

ಈ ಪಟ್ಟಿಯಲ್ಲಿ ಬ್ರೆಜಿಲ್, ರಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ, ನೈಜೀರಿಯಾ, ಸೋಮಾಲಿಯಾ, ಇರಾನ್, ಯೆಮನ್ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳು ಸೇರಿವೆ. ಅಮೆರಿಕದ ಹೇಳಿಕೆಯಂತೆ, ಇದು ಭದ್ರತಾ ಪರಿಶೀಲನೆ ಮತ್ತು ವಲಸೆ ವ್ಯವಸ್ಥೆಯ ಪುನರ್ ಪರಿಶೀಲನೆಯ ಭಾಗವಾಗಿದೆ. ಆದರೆ ವಾಸ್ತವದಲ್ಲಿ ಇದು ವಲಸೆ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಸಾಧಿಸುವ ರಾಜಕೀಯ ನಿರ್ಧಾರವೆಂಬ ಟೀಕೆಗಳು ಹೆಚ್ಚಾಗಿವೆ.

ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವಾಗ ಅಮೇರಿಕಾ ಜಾಗತಿಕ ನಡೆ ವಸಾಹತುಶಾಹಿಯತ್ತ ಮತ್ತೇ ಮುಖ ಮಾಡಿರುವಂತೆ ಕಾಣುತ್ತಿದೆ. ಹಿಂದೆ ವಸಾಹತುಶಾಹಿ ಸೇನೆ ಮತ್ತು ಆಕ್ರಮಣದ ಮೂಲಕ ನಡೆಯುತ್ತಿತ್ತು. ಇದೀಗ ಸುಂಕ, ಸೈನಿಕ ದಾಳಿ, ತೈಲ, ವ್ಯಾಪಾರ ಮತ್ತು ವೀಸಾ ನಿರ್ಬಂಧಗಳ ಮೂಲಕ ರಾಷ್ಟ್ರಗಳ ಮೇಲೆ ಒತ್ತಡ ತರುವ ಹೊಸ ಮಾದರಿಯಾಗಿ ಕಾಣಿಸುತ್ತಿದೆ. ಇದಕ್ಕೊಂದು‌ ಕಡಿವಾಣ ಹಾಕದಿದ್ದರೆ, ಮುಂದೆ ದೊಡ್ಡ ಅಪಾಯಕ್ಕೆ ನಾಂದಿ‌ ಹಾಡಿದಂತೆ..!

Advertisement

LEAVE A REPLY

Please enter your comment!
Please enter your name here