ಮಹಿಳೆಯರು–ಮಂಗಳಮುಖಿಯರಿಗೆ ಉಚಿತ ಆಟೋ ಚಾಲನಾ ತರಬೇತಿ; ಸರ್ಕಾರದಿಂದ ಸಂಪೂರ್ಣ ಬೆಂಬಲ:‌ ಸಚಿವ ರಾಮಲಿಂಗಾರೆಡ್ಡಿ

0
3
Advertisement

ಬೆಂಗಳೂರು, ಫೆ.27: ಮಹಿಳೆಯರು ಹಾಗೂ ಮಂಗಳಮುಖಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ ಉಚಿತ ಆಟೋ ಚಾಲನಾ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಕ್ರಮವಾಗಿದ್ದು, ಈ ಯೋಜನೆಗೆ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬಿ.ಪ್ಯಾಕ್ ಮತ್ತು ಸಿಜಿಐ ಸಹಯೋಗದಲ್ಲಿ ಬಿಟಿಎಂ ಲೇಔಟ್‌ನಲ್ಲಿ ಆಯೋಜಿಸಿದ್ದ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಉಚಿತ ಆಟೋ ಚಾಲನಾ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ಹಾಗೂ ಮಂಗಳಮುಖಿಯರನ್ನು ಆರ್ಥಿಕವಾಗಿ ಬಲಪಡಿಸುವ ಪ್ರಯತ್ನಗಳು ಅತ್ಯಂತ ಪ್ರಶಂಸನೀಯವೆಂದು ಹೇಳಿದರು.

ಇಂದು ಬೆಂಗಳೂರಿನಲ್ಲಿ ಯಾವುದೇ ಸ್ಥಳಕ್ಕೆ ತೆರಳಲು ಆಟೋ ಅನಿವಾರ್ಯವಾಗಿದ್ದು, ನಗರ ಸಾರಿಗೆಯ ಬೆನ್ನೆಲುಬಾಗಿ ಆಟೋಗಳು ನಿಂತಿವೆ. ಈ ಹಿನ್ನೆಲೆಯಲ್ಲಿ ಆಟೋ ಚಾಲಕರ ಸಮುದಾಯಕ್ಕೆ ಇನ್ನಷ್ಟು ಯೋಜನೆಗಳು ಹಾಗೂ ಸೌಲಭ್ಯಗಳನ್ನು ಒದಗಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ರಾಜ್ಯ ಬಜೆಟ್ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕಾರ್ಯಕ್ರಮದ ಆಯೋಜಕರು ಮಾತನಾಡಿ, ಈ ಯೋಜನೆಯಡಿ ಈಗಾಗಲೇ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಪ್ರಮಾಣಿತ ಆಟೋ ಚಾಲಕರಾಗಿ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸುವ ಉದ್ದೇಶವಿದೆ ಎಂದು ತಿಳಿಸಿದರು.

Advertisement

LEAVE A REPLY

Please enter your comment!
Please enter your name here