ಜಲ ಜೀವನ್ ಮಿಷನ್ ಪರಿಣಾಮಕಾರಿ ಅನುಷ್ಠಾನ; ರಾಜ್ಯದ ಇಬ್ಬರು ಮಹಿಳೆಯರಿಗೆ ರಾಷ್ಟ್ರಪತಿ ಶ್ಲಾಘನೆ!

0
3
Advertisement

ಬೆಂಗಳೂರು, ಮಾ.20: ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ಗ್ರಾಮೀಣ ನೀರಿನ ಆಡಳಿತವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಸಾಧನೆಗಾಗಿ ರಾಜ್ಯದ ಗ್ರಾಮೀಣ ಪ್ರದೇಶಗಳ ಇಬ್ಬರು ಮಹಿಳೆಯರನ್ನು ರಾಷ್ಟ್ರಮಟ್ಟದಲ್ಲಿ ಗೌರವಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ಮುದ್ದತನೂರು ಗ್ರಾಮದ ಅನಿತಾ ಹಾಗೂ ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದ ಚನ್ನಮ್ಮ ಅವರನ್ನು 2026ರ ಜಲ ಮಹೋತ್ಸವದಲ್ಲಿ ಸನ್ಮಾನಿಸಲಾಯಿತು. ಇವರ ಕೊಡುಗೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದರು. ಜಲಶಕ್ತಿ ಸಚಿವಾಲಯವು ಮಾರ್ಚ್ 8ರಿಂದ ಮಾರ್ಚ್ 22ರವರೆಗೆ ಜಲ ಮಹೋತ್ಸವ–2026 ಅನ್ನು ಆಯೋಜಿಸಿದೆ.

ಮುದ್ದತನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 24/7 ನೀರು ಸರಬರಾಜು ಖಚಿತಪಡಿಸಲು ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ಅನಿತಾ ಅವರನ್ನು ಗೌರವಿಸಲಾಗಿದ್ದು, ಸಾರವಾಡ ಗ್ರಾಮ ಪಂಚಾಯತ್‌ನ ಪ್ರತಿಯೊಂದು ಮನೆಗೂ ನಿರಂತರ ಪೈಪ್ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಶ್ರಮಿಸಿದ್ದಕ್ಕಾಗಿ ಚನ್ನಮ್ಮ ಪ್ರಶಸ್ತಿ ಪಡೆದಿದ್ದಾರೆ.

ಗ್ರಾಮ ಪಂಚಾಯತ್ ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯೊಂದಿಗೆ ಕೈಜೋಡಿಸಿದ ಅನಿತಾ, ನೀರಿನ ಸಂಪರ್ಕವಿಲ್ಲದ ಮನೆಗಳನ್ನು ಗುರುತಿಸಿ, ಮನೆ ಮನೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಿದರು. ನೀರು ಸರಬರಾಜು ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು, ಸಿಬ್ಬಂದಿಯೊಂದಿಗೆ ಸಮನ್ವಯ ಸಾಧನೆ, ದೈನಂದಿನ ವಿತರಣೆಯ ಮೇಲ್ವಿಚಾರಣೆ ಹಾಗೂ ಸೋರಿಕೆ ಅಥವಾ ಸ್ಥಗಿತಗಳ ಬಗ್ಗೆ ತಕ್ಷಣ ವರದಿ ಮಾಡುವ ಕೆಲಸ ನಿರ್ವಹಿಸಿದರು ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಅಂಗನವಾಡಿ ಕಾರ್ಯಕರ್ತೆಯಾದ ಚನ್ನಮ್ಮ, ಕುಟುಂಬಗಳನ್ನು ಸಂಪರ್ಕಿಸಿ ಜವಾಬ್ದಾರಿಯುತ ನೀರಿನ ಬಳಕೆ ಹಾಗೂ ಸುರಕ್ಷಿತ ಕುಡಿಯುವ ನೀರಿನ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸಿದರು. ಪ್ರತಿ ಕುಟುಂಬವೂ ಪೈಪ್ ನೀರಿನ ಸಂಪರ್ಕವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಹಾಗೂ ನಿರ್ವಹಿಸುವಂತೆ ಪ್ರೋತ್ಸಾಹಿಸಿದುದಾಗಿ ತಿಳಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here