
ಬೆಂಗಳೂರು, ಫೆ.27: ತರಕಾರಿ, ಹಣ್ಣು ಸೇರಿದಂತೆ ಹಲವು ಆಹಾರ ಪದಾರ್ಥಗಳಲ್ಲಿ ರಾಸಾಯನಿಕಗಳ ಬಳಕೆ ಜನರಲ್ಲಿ ಆತಂಕ ಹುಟ್ಟಿಸಿರುವ ನಡುವೆಯೇ, ರಾಜ್ಯದ ಕುಡಿಯುವ ನೀರಿನಲ್ಲಿಯೂ ಕೆಮಿಕಲ್‌ಗಳು ಹಾಗೂ ಬ್ಯಾಕ್ಟೀರಿಯಾಗಳು ಪತ್ತೆಯಾಗಿರುವುದು ಮತ್ತೊಂದು ಆಘಾತಕಾರಿ ಬೆಳವಣಿಗೆಯಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಜಲಜೀವನ್ ಮಿಷನ್ ಅಡಿಯಲ್ಲಿ ಪ್ರಯೋಗಾಲಯಗಳಿಗೆ ಕಳುಹಿಸಿ ಪರೀಕ್ಷೆ ನಡೆಸಲಾಗಿದ್ದು, ನೀರಿನಲ್ಲಿ ರಾಸಾಯನಿಕ ಮತ್ತು ಬ್ಯಾಕ್ಟೀರಿಯಾ ಅಂಶಗಳಿರುವುದು ದೃಢಪಟ್ಟಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಇಲಾಖೆ ಕಾಲಕಾಲಕ್ಕೆ ಅಗತ್ಯ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರುವುದರಿಂದ, ಪ್ರಸಕ್ತ ಸಾಲಿನಲ್ಲಿ ಕಲುಷಿತ ನೀರಿನಿಂದ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾದ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಮೂಲಗಳನ್ನು ನಿಗದಿತ ಮಾರ್ಗಸೂಚಿಗಳಂತೆ ಬಿಐಎಸ್ 10500–2012 ಗುಣಮಟ್ಟದ ಮಾನದಂಡದ ಪ್ರಕಾರ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತಿದೆ. ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಪ್ರಯೋಗಾಲಯಗಳು ಹಾಗೂ 47 ತಾಲ್ಲೂಕು ಮಟ್ಟದ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದು, 2023–24ರಿಂದಲೇ ನೀರಿನ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಅಂಕಿಅಂಶಗಳ ಪ್ರಕಾರ, 2023–24ರಲ್ಲಿ ಸಂಗ್ರಹಿಸಿದ 2.98 ಲಕ್ಷ ನೀರಿನ ಮಾದರಿಗಳಲ್ಲಿ ಸುಮಾರು 25 ಸಾವಿರ ಮಾದರಿಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ. 2024–25ರಲ್ಲಿ ಪರೀಕ್ಷಿಸಲಾದ 3.9 ಲಕ್ಷ ಮಾದರಿಗಳಲ್ಲಿ 17,261 ಮಾದರಿಗಳಲ್ಲಿ ರಾಸಾಯನಿಕಗಳ ύಪಸ್ಥಿತಿ ಕಂಡುಬಂದಿದೆ. ಇನ್ನು ಈ ವರ್ಷ ಇದುವರೆಗೆ 2.46 ಲಕ್ಷ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, 10,911 ಮಾದರಿಗಳಲ್ಲಿ ರಾಸಾಯನಿಕ ಅಂಶಗಳು ಇರುವುದನ್ನು ದೃಢಪಡಿಸಲಾಗಿದೆ.
ಸುರಕ್ಷಿತ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ, ಕಲುಷಿತ ನೀರು ಪತ್ತೆಯಾದ ಪ್ರದೇಶಗಳಲ್ಲಿ ಇಲಾಖೆ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸ್ಪಷ್ಟಪಡಿಸಿದೆ.





