
ಬೆಂಗಳೂರು, ಮಾ.06: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಿದ್ದು, ಮದ್ಯ ಪ್ರಿಯರಿಗೆ ಸುಂಕದ ಶಾಕ್ ನೀಡಿದ್ದಾರೆ. ಮದ್ಯದ ಮೇಲೆ ವಿಧಿಸುವ ತೆರಿಗೆ ಸ್ವರೂಪವನ್ನು ಬದಲಾಯಿಸಿ ರಾಜ್ಯದ ರಾಜಸ್ವ ಸಂಗ್ರಹವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಇನ್ನು ಮುಂದೆ ಮದ್ಯದಲ್ಲಿರುವ ಆಲ್ಕೋಹಾಲ್ ಅಂಶವನ್ನು ಆಧಾರವಾಗಿಟ್ಟುಕೊಂಡು ತೆರಿಗೆ ವಿಧಿಸಲಾಗುವುದು. ಎಕ್ಸ್-ಫ್ಯಾಕ್ಟರಿ ದರಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಮದ್ಯದ ಬೆಲೆಯನ್ನು ಒಂದೇ ಬಾರಿ ಏರಿಸುವ ಬದಲು ಹಂತ ಹಂತವಾಗಿ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. 2026–27ರ ವೇಳೆಗೆ ಮದ್ಯದಿಂದ 45,000 ಕೋಟಿ ರೂ. ರಾಜಸ್ವ ಸಂಗ್ರಹಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.
ಮದ್ಯಪಾನದ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಅನುಸರಿಸಲಾಗುತ್ತಿರುವ Alcohol-in-Beverage (AIB) ಆಧಾರಿತ ತೆರಿಗೆ ಪದ್ಧತಿಯನ್ನು ರಾಜ್ಯದಲ್ಲೂ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಹೊಸ ಅಬಕಾರಿ ಸುಂಕ ವ್ಯವಸ್ಥೆಯನ್ನು ಏಪ್ರಿಲ್ 2026ರಿಂದ ಜಾರಿಗೆ ತರಲಾಗುವುದು.
ಮುಂದಿನ ಮೂರುರಿಂದ ನಾಲ್ಕು ವರ್ಷಗಳಲ್ಲಿ ಎಲ್ಲಾ ಪಾನೀಯಗಳ ಮೇಲೂ ಪ್ರತಿ ಲೀಟರ್‌ನಲ್ಲಿರುವ ಆಲ್ಕೋಹಾಲ್ ಅಂಶವನ್ನು ಆಧಾರವಾಗಿಟ್ಟುಕೊಂಡು ಏಕರೂಪ ಅಬಕಾರಿ ಸುಂಕ ವಿಧಿಸುವ ವ್ಯವಸ್ಥೆಗೆ ಹಂತ ಹಂತವಾಗಿ ಪರಿವರ್ತನೆಗೊಳ್ಳಲಿದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಮಾರುಕಟ್ಟೆ ಪರಿಗಣನೆ ಆಧಾರದಲ್ಲಿ ಮದ್ಯ ಉತ್ಪನ್ನಗಳನ್ನು ವಿವಿಧ ದರದ ಸ್ಟ್ರಾಬ್‌ಗಳಲ್ಲಿ ಇರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ ನೀಡಲಾಗುತ್ತದೆ. ಮದ್ಯದ ದರ ನಿಗದಿ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಪ್ರಸ್ತುತ ಇರುವ 16 ಸ್ಟ್ರಾಬ್‌ಗಳನ್ನು 8ಕ್ಕೆ ಇಳಿಸಲು ಸರ್ಕಾರ ತೀರ್ಮಾನಿಸಿದೆ.
2025–26ನೇ ಸಾಲಿನಲ್ಲಿ ಫೆಬ್ರವರಿ ಅಂತ್ಯದವರೆಗೆ ಮದ್ಯದಿಂದ 36,492 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಇದು ಕಳೆದ ಸಾಲಿನ ಹೋಲಿಕೆಯಲ್ಲಿ ಶೇ.12.7 ರಷ್ಟು ಹೆಚ್ಚಳವಾಗಿದೆ. ಮುಂದಿನ 2026–27ನೇ ಸಾಲಿಗೆ 45,000 ಕೋಟಿ ರೂ. ಸಂಗ್ರಹಿಸುವ ಗುರಿ ಇಡಲಾಗಿದೆ.
ಇನ್ನೊಂದೆಡೆ ತೆರಿಗೆ ಸೋರಿಕೆಯನ್ನು ತಡೆಯಲು ತಂತ್ರಜ್ಞಾನ ಆಧಾರಿತ ಬ್ಲಾಕ್‌ಚೈನ್ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.
ಮದ್ಯ ರವಾನೆಗೆ ಪ್ರಸ್ತುತ ಇರುವ ಬೆಂಗಾವಲು ವ್ಯವಸ್ಥೆಯ ಬದಲಿಗೆ ಜಿಯೋ-ಫೆನ್ಸ್ ಇ-ಲಾಕ್ ವ್ಯವಸ್ಥೆ ಅಳವಡಿಸಲಾಗುವುದು. ಈ ಕ್ರಮಗಳಿಂದ ಮೇಲ್ವಿಚಾರಣೆ ಸುಲಭವಾಗುವುದರ ಜೊತೆಗೆ ಪಾರದರ್ಶಕತೆ ಹೆಚ್ಚಲಿದೆ ಎಂದು ಸರ್ಕಾರ ತಿಳಿಸಿದೆ.





