ಬೆಂಗಳೂರು: ಹೊಸ ವರ್ಷಾಚರಣೆಗೆ ಬಿಗಿ ಭದ್ರತೆ, ಮೆಟ್ರೋ ಸೇವೆ ವಿಸ್ತರಣೆ!

0
23
Advertisement

ಬೆಂಗಳೂರು, ಡಿ.30: ಬೆಂಗಳೂರು ನಗರದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಇನ್ನೇನು ದಿನವಷ್ಟೇ ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ನಗರ ಪೊಲೀಸರು ಫುಲ್ ಅಲರ್ಟ್ ಘೋಷಿಸಿದ್ದಾರೆ. ನಗರಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಕೋರಮಂಗಲ, ಇಂದಿರಾನಗರ, ಎಂ.ಜಿ.ರೋಡ್ ಸೇರಿದಂತೆ ಪಾರ್ಟಿ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ.

ಇದೇ ವೇಳೆ, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪಾರ್ಟಿ ಪ್ರಿಯರಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 31ರ ರಾತ್ರಿ ಹಾಗೂ ಜನವರಿ 1ರ ಬೆಳಗ್ಗಿನ ವೇಳೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಮೆಟ್ರೋ ಸೇವಾ ಸಮಯವನ್ನು ವಿಸ್ತರಿಸಲಾಗಿದೆ.

ಕೆಲವು ಮಾರ್ಗಗಳಲ್ಲಿ ಕೊನೆಯ ರೈಲುಗಳು ಬೆಳಗಿನ ಜಾವ 3.10ರವರೆಗೆ ಸಂಚರಿಸಲಿವೆ. ಜನಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ವಿತರಣೆಯಾಗುವುದಿಲ್ಲ. ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಕೌಂಟರ್‌ಗಳನ್ನು ಮುಚ್ಚಲಾಗುತ್ತಿದ್ದು, ಪ್ರಯಾಣಿಕರು ಕ್ಯೂಆರ್ ಕೋಡ್ ಮೂಲಕ ಮಾತ್ರ ಪ್ರಯಾಣಿಸಬೇಕು ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟಕ್ಕೆ ಕೊನೆಯ ರೈಲು ಬೆಳಿಗ್ಗೆ 1.45ಕ್ಕೆ ಮತ್ತು ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ಬೆಳಿಗ್ಗೆ 2ಕ್ಕೆ ಹೊರಡಲಿದೆ. ಹಸಿರು ಮಾರ್ಗದಲ್ಲಿ ಮಾದವರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವಿನ ಕೊನೆಯ ರೈಲುಗಳು ಎರಡೂ ದಿಕ್ಕುಗಳಲ್ಲಿ ಬೆಳಿಗ್ಗೆ 2 ಗಂಟೆಗೆ ಸಂಚರಿಸಲಿವೆ.

ರ್ಟಿ ಹಾಟ್‌ಸ್ಪಾಟ್ ಆಗಿರುವ ಎಂ.ಜಿ.ರೋಡ್‌ನಲ್ಲಿ ಹೆಚ್ಚಿನ ಜನಸಂದಣಿ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ 31ರ ರಾತ್ರಿ 10 ಗಂಟೆಯಿಂದ ಎಂ.ಜಿ.ರೋಡ್ ಮೆಟ್ರೋ ನಿಲ್ದಾಣವನ್ನು ಸಂಪೂರ್ಣವಾಗಿ ಮುಚ್ಚಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಈ ಸಮಯದಲ್ಲಿ ಎಂಟ್ರಿ ಹಾಗೂ ಎಗ್ಸಿಟ್ ಎರಡನ್ನೂ ಬಂದ್ ಮಾಡಲಾಗುತ್ತದೆ. ಆದರೆ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳು ಕಾರ್ಯನಿರ್ವಹಿಸುತ್ತವೆ.

ಹಳದಿ ಮಾರ್ಗದಲ್ಲಿ, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಕೊನೆಯ ರೈಲು ಬೆಳಗಿನ ಜಾವ 3.10ಕ್ಕೆ ಮತ್ತು ಬೊಮ್ಮಸಂದ್ರದಿಂದ ಆರ್‌ವಿ ರಸ್ತೆಗೆ ಅಂತಿಮ ರೈಲು ಬೆಳಗಿನ ಜಾವ 1.30ಕ್ಕೆ ಹೊರಡಲಿದೆ.

ಪ್ರಮುಖ ಇಂಟರ್‌ಚೇಂಜ್ ಕೇಂದ್ರವಾಗಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್)ದಿಂದ ವೈಟ್‌ಫೀಲ್ಡ್, ಚಲ್ಲಘಟ್ಟ, ಮಾದವರ ಹಾಗೂ ಸಿಲ್ಕ್ ಇನ್‌ಸ್ಟಿಟ್ಯೂಟ್ ಕಡೆಗೆ ಕೊನೆಯ ರೈಲುಗಳು ಬೆಳಗಿನ ಜಾವ 2.45ಕ್ಕೆ ಸಂಚರಿಸಲಿವೆ. ಹೊಸ ವರ್ಷಾಚರಣೆಯನ್ನು ಶಾಂತಿಯುತವಾಗಿ ಆಚರಿಸಲು ಸಾರ್ವಜನಿಕರು ಪೊಲೀಸ್ ಹಾಗೂ ಮೆಟ್ರೋ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Advertisement

LEAVE A REPLY

Please enter your comment!
Please enter your name here