ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೇದಾ ಜಿಯಾ ನಿಧನ!

0
20
Advertisement

ಢಾಕಾ, ಡಿ.30:ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಮಂತ್ರಿ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೇದಾ ಜಿಯಾ ಅವರು ಮಂಗಳವಾರ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಲಿವರ್ ಸಿರೋಸಿಸ್, ಸಂಧಿವಾತ, ಮಧುಮೇಹ ಹಾಗೂ ಹೃದಯ ಸಂಬಂಧಿತ ಗಂಭೀರ ಕಾಯಿಲೆಗಳಿಂದ ಖಲೇದಾ ಜಿಯಾ ದೀರ್ಘಕಾಲ ಬಳಲುತ್ತಿದ್ದರು. ವಯೋಸಹಜ ಕಾಯಿಲೆಗಳ ತೀವ್ರತೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಬಿಎನ್‌ಪಿ ಅಧಿಕೃತ ಪ್ರಕಟಣೆ ಹೊರಡಿಸಿ, ಖಲೇದಾ ಜಿಯಾ ಅವರ ನಿಧನವನ್ನು ಖಚಿತಪಡಿಸಿದೆ. “ಬಿಎನ್‌ಪಿ ಅಧ್ಯಕ್ಷೆ ಹಾಗೂ ಮಾಜಿ ಪ್ರಧಾನಮಂತ್ರಿ ಖಲೇದಾ ಜಿಯಾ ಇಂದು ಬೆಳಗ್ಗೆ ನಿಧನರಾದರು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಖಲೇದಾ ಜಿಯಾ ಅವರನ್ನು ನವೆಂಬರ್ 23ರಂದು ಢಾಕಾದ ಎವರ್‌ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 11ರಂದು ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ವೆಂಟಿಲೇಟರ್ ಸಹಾಯ ಒದಗಿಸಲಾಗಿತ್ತು. ದಿನೇದಿನೇ ಆರೋಗ್ಯ ಮತ್ತಷ್ಟು ಕ್ಷೀಣಿಸುತ್ತಿದ್ದುದರಿಂದ ಬದುಕುಳಿಯುವ ನಿರೀಕ್ಷೆ ಕ್ಷೀಣಿಸಿತ್ತು. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.

ಖಲೇದಾ ಜಿಯಾ ಅವರು 1991ರಿಂದ 1996 ಹಾಗೂ 2001ರಿಂದ 2006ರವರೆಗೆ ಬಾಂಗ್ಲಾದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದ್ದರು. ಅವರು ಪ್ರಧಾನಿ ಶೇಖ್ ಹಸೀನಾ ಅವರ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಯಾಗಿಯೂ ಗುರುತಿಸಿಕೊಂಡಿದ್ದರು.

Advertisement

LEAVE A REPLY

Please enter your comment!
Please enter your name here