ಆಲಸ್ಯ ನಮ್ಮ ಶತ್ರು

0
3
Advertisement

ಲೇಖಕರು:ಗಣೇಶ ರಾಮಚಂದ್ರ ಮಾಂಡ್ರೆ
ಸಾಹಿತಿಗಳು, ಅರಿವು ಬೋಧಿ ಪ್ರಕಾಶನ

ಪೇರಣೆ:ಹರೀಶ ಯಡವಾಣಿ

ಒಂದು ಕಾಡಿನಲ್ಲಿ ಎರಡು ಪಕ್ಷಿಗಳು ಇದ್ದವು. ಅವೆರಡೂ ಒಂದೇ ತಾಯಿಯಿಂದ ಹುಟ್ಟಿದವು. ಆದರೆ ಅವುಗಳ ಜೀವನ ಶೈಲಿ ಸಂಪೂರ್ಣವಾಗಿ ವಿಭಿನ್ನವಾಗಿತ್ತು.

ಒಂದು ಪಕ್ಷಿ ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಕಾಡಿನಲ್ಲೆಲ್ಲ ಹಾರಾಡಿ, ಕಷ್ಟಪಟ್ಟು ಆಹಾರ ಹುಡುಕಿ ತಿನ್ನುತ್ತಿತ್ತು. ಮಳೆ ಬಂದರೂ, ಬಿಸಿಲಾದರೂ ಅದು ತನ್ನ ಪ್ರಯತ್ನವನ್ನು ನಿಲ್ಲಿಸುತ್ತಿರಲಿಲ್ಲ. ತನ್ನ ಶ್ರಮದಿಂದ ಬದುಕು ಕಟ್ಟಿಕೊಂಡಿತ್ತು.

ಮತ್ತೊಂದು ಪಕ್ಷಿ ಅರಮನೆಯಲ್ಲಿತ್ತು. ಅದು ರಾಜನ ಆಶ್ರಯದಲ್ಲಿ ಸುಖವಾಗಿ ಬದುಕುತ್ತಿತ್ತು. ಪ್ರತಿದಿನ ಒಂದೇ ಟೊಂಗಿಯ ಮೇಲೆ ಕುಳಿತುಕೊಂಡೇ ಇರುತ್ತಿತ್ತು. ರಾಜನೇ ಅದಕ್ಕೆ ಆಹಾರ ಹಾಕಿಸುತ್ತಿದ್ದ. ಅದು ಹಾರಲು, ಹುಡುಕಲು, ಪ್ರಯತ್ನಿಸಲು ಅಗತ್ಯವೇ ಇರಲಿಲ್ಲ. ನಿಧಾನವಾಗಿ ಅದು ಆಲಸ್ಯಕ್ಕೆ ಬಲಿಯಾದಿತು.

ಒಂದು ದಿನ ರಾಜನಿಗೆ ಆಶ್ಚರ್ಯವಾಯಿತು. “ಇವೆರಡೂ ಒಂದೇ ತಾಯಿಯಿಂದ ಹುಟ್ಟಿದವು. ಹಾಗಿದ್ದರೆ ಒಂದೊಂದು ಹೇಗೆ ಇಷ್ಟು ವಿಭಿನ್ನ?” ಎಂದು ಆತ ಯೋಚಿಸಿದ. ಟೊಂಗಿಯ ಮೇಲೆ ಕುಳಿತಿದ್ದ ಪಕ್ಷಿಯ ಆಲಸ್ಯ ಹೋಗಬೇಕು ಎಂದು ಹಲವು ಪ್ರಯತ್ನಗಳನ್ನು ಮಾಡಿದ.

ಗಂಟೆ ಬಾರಿಸಿದರು. ಅದು ಕದಲಲಿಲ್ಲ. ಬಟ್ಟಿಯಿಂದ ಹೆದರಿಸಿದರು. ಅದು ಕೆಳಗಿಳಿಯಲಿಲ್ಲ. ಡಂಗುರ ಸಾರಿಸಿದರು. ಆದರೂ ಅದು ತನ್ನ ಜಾಗ ಬಿಟ್ಟಿಲ್ಲ.

ಕೊನೆಗೆ ರಾಜ ಘೋಷಣೆ ಮಾಡಿದರು: “ಈ ಪಕ್ಷಿಯ ಆಲಸ್ಯ ಹೋಗುವಂತೆ ಮಾಡಿದವರಿಗೆ ಬಹುಮಾನ!”
ಅದಾಗ ಒಬ್ಬ ರೈತ ಮುಂದೆ ಬಂದ. ಅವನು ಏನೂ ಉಪದೇಶ ಮಾಡಲಿಲ್ಲ, ಬೆದರಿಸಲಿಲ್ಲ. ನೇರವಾಗಿ ಟೊಂಗಿಯನ್ನೇ ಕಡಿದು ಬಿಟ್ಟ.
ಟೊಂಗಿ ಕೆಳಗೆ ಬಿದ್ದಿತು.

ಪಕ್ಷಿಗೆ ಬೇರೆ ದಾರಿ ಇರಲಿಲ್ಲ. ಅದು ಹಾರಲೇಬೇಕಾಯಿತು. ಮೊದಲಿಗೆ ಹೆದರಿತು. ಆದರೆ ಹಾರಲು ಪ್ರಾರಂಭಿಸಿದಾಗ ತನ್ನಲ್ಲಿದ್ದ ಶಕ್ತಿಯನ್ನು ಅರಿತುಕೊಂಡಿತು. ಕೆಲವೇ ದಿನಗಳಲ್ಲಿ ಅದು ಕೂಡ ಕಾಡಿನಲ್ಲೇ ಆಹಾರ ಹುಡುಕಿ ಬದುಕಲು ಶುರುಮಾಡಿತು.

ನಮ್ಮಲ್ಲಿ ಅನೇಕರು ಸುಖದ ಟೊಂಗಿಯ ಮೇಲೆ ಕುಳಿತುಕೊಂಡಿರುವಂತೆ ಜೀವನ ನಡೆಸುತ್ತೇವೆ. ಮೊಬೈಲ್, ಆರಾಮ, ಇನ್ನೊಬ್ಬರ ಸಹಾಯ — ಇವುಗಳ ಮೇಲೆ ಅವಲಂಬಿತರಾಗುತ್ತೇವೆ. ಆದರೆ ನಮ್ಮ ಸಾಮರ್ಥ್ಯವನ್ನು ಅರಿಯಲು ಕೆಲವೊಮ್ಮೆ ಆ “ಟೊಂಗಿ” ಕತ್ತರಿಸಬೇಕು.

ಆಲಸ್ಯದಿಂದ ಹೊರಬರಲು:
ಸುಖ ವಲಯವನ್ನು (comfort zone) ಬಿಟ್ಟು ಹೊರಬನ್ನಿ.
ನಿಮ್ಮ ಮೇಲೆ ನೀವು ಒತ್ತಡ ಹಾಕಿಕೊಳ್ಳಿ.
ಪ್ರತಿದಿನ ಒಂದು ಹೊಸ ಪ್ರಯತ್ನ ಮಾಡಿ.
ಯಾರಾದರೂ ನಿಮ್ಮ ಟೊಂಗಿ ಕತ್ತರಿಸುವುದನ್ನು ಕಾಯಬೇಡಿ ನೀವೇ ಕತ್ತರಿಸಿ.

ಶ್ರಮಿಸಿದವರಿಗೆ ಮಾತ್ರ ಸಾಮರ್ಥ್ಯ ಅರಿವು ಬರುತ್ತದೆ.
ಆಲಸ್ಯ ನಮ್ಮ ಶತ್ರು; ಪ್ರಯತ್ನ ನಮ್ಮ ಗೆಳೆಯ.

Advertisement

LEAVE A REPLY

Please enter your comment!
Please enter your name here