ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ; ಡಿಎಂಕೆ ಸೇರ್ಪಡೆಗೊಂಡ ಮಾಜಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ!

0
5
Advertisement

ಚೆನ್ನೈ, ಫೆ.27: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆಯಿಂದ ಉಚ್ಚಾಟಿತರಾಗಿದ್ದ ಹಾಗೂ ದಿವಂಗತ ಜಯಲಲಿತಾ ಅವರ ಆಪ್ತ ಶಿಷ್ಯರಾಗಿದ್ದ ಓ. ಪನ್ನೀರ್‌ಸೆಲ್ವಂ ಶುಕ್ರವಾರ ಆಡಳಿತಪಕ್ಷವಾದ ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾದರು.

ಚೆನ್ನೈನ ಡಿಎಂಕೆ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ಪನ್ನೀರ್‌ಸೆಲ್ವಂ ಅಧಿಕೃತವಾಗಿ ಪಕ್ಷದ ಸದಸ್ಯತ್ವ ಸ್ವೀಕರಿಸಿದರು. ಬೆಳಿಗ್ಗೆಯಿಂದಲೇ ಅಣ್ಣಾ ಅರಿವಲಯಂ ಹೊರಭಾಗದಲ್ಲಿ ಜಮಾಯಿಸಿದ ಪನ್ನೀರ್‌ಸೆಲ್ವಂ ಬೆಂಬಲಿಗರು ಘೋಷಣೆಗಳನ್ನು ಕೂಗಿ ಸಂಭ್ರಮ ವ್ಯಕ್ತಪಡಿಸಿದರು.

ಪನ್ನೀರ್‌ಸೆಲ್ವಂ ಅವರೊಂದಿಗೆ ಎಐಎಡಿಎಂಕೆ ಪಕ್ಷದ ಹಲವು ಪ್ರಮುಖ ನಾಯಕರು ಮತ್ತು ಕಾರ್ಯಕರ್ತರೂ ಡಿಎಂಕೆ ಸೇರ್ಪಡೆಯಾದರು. 2022ರ ಜುಲೈ 11ರಂದು ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ನೇಮಿಸಿದ ಬಳಿಕ, ಪ್ರತಿಸ್ಪರ್ಧಿಯಾಗಿದ್ದ ಪನ್ನೀರ್‌ಸೆಲ್ವಂ ಅವರನ್ನು ಪಕ್ಷದ ಖಜಾಂಚಿ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿತ್ತು.

ಇತ್ತೀಚೆಗೆ ಎಐಎಡಿಎಂಕೆಯ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಆರ್. ವೈತಿಲಿಂಗಂ ಜನವರಿ 21ರಂದು ವಿಧಾನಸಭೆಗೆ ರಾಜೀನಾಮೆ ನೀಡಿ ಡಿಎಂಕೆ ಸೇರ್ಪಡೆಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ತಮಿಳುನಾಡಿನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Advertisement

LEAVE A REPLY

Please enter your comment!
Please enter your name here