ಬೆಂಗಳೂರಿನ 26 ಸ್ಟಾರ್‌ ಹೋಟೆಲ್‌ಗಳ ಮೇಲೆ ದಾಳಿ; ಅವಧಿ ಮೀರಿದ ಮಾಂಸ, ಕೊಳೆತ ತರಕಾರಿ ಪತ್ತೆ!

0
1

ಬೆಂಗಳೂರು, ಆ.8: ನಗರದ ತ್ರೀ ಸ್ಟಾರ್‌ ಹಾಗೂ ಫೈವ್‌ ಸ್ಟಾರ್‌ ಸೇರಿದಂತೆ 26 ಸ್ಟಾರ್‌ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಪತ್ತೆಯಾಗಿದೆ.

ತಪಾಸಣೆ ವೇಳೆ ಅವಧಿ ಮೀರಿದ ಮಾಂಸ, ಕೊಳೆತ ತರಕಾರಿ ಹಾಗೂ ಅವಧಿ ಮೀರಿದ ಹಾಲು ಪತ್ತೆಯಾಗಿದೆ. ಅಲ್ಲದೆ, ಮಾಂಸಾಹಾರಿ ಮತ್ತು ಸಸ್ಯಾಹಾರಿ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸದೆ ಒಟ್ಟಿಗೆ ಇರಿಸಿರುವುದು, ತರಕಾರಿಗಳ ಮೇಲೆ ಫಂಗಸ್‌ ಬೆಳೆದಿರುವುದು ಹಾಗೂ ಲೇಬಲ್‌ ಇಲ್ಲದ ಆಹಾರ ಪದಾರ್ಥಗಳ ಬಳಕೆ ಸೇರಿದಂತೆ ಹಲವು ಲೋಪಗಳು ಬೆಳಕಿಗೆ ಬಂದಿವೆ.

ಲಲಿತ್ ಅಶೋಕ್‌ನಲ್ಲಿ 76 ಕೆ.ಜಿ. ಮಾಂಸ ಜಪ್ತಿ

ನಗರದ ಪ್ರಸಿದ್ಧ ಲಲಿತ್ ಅಶೋಕ್ ಹೋಟೆಲ್‌ನಲ್ಲಿ 76 ಕೆ.ಜಿ. ಮಾಂಸ, 200 ಕೆ.ಜಿ. ತರಕಾರಿ ಹಾಗೂ 32 ಲೀಟರ್ ಅವಧಿ ಮೀರಿದ ಹಾಲನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇದೇ ವೇಳೆ ಶಾಂಗ್ರಿ-ಲಾ ಹೋಟೆಲ್‌ನಲ್ಲಿ 15 ಕೆ.ಜಿ. ಮಾಂಸ, ಫೋರ್ ಸೀಸನ್ ಹೋಟೆಲ್‌ನಲ್ಲಿ 19 ಕೆ.ಜಿ. ಮಾಂಸ ಹಾಗೂ ತಾಜ್ ವಿವಾಂತ ವೈಟ್‌ಫೀಲ್ಡ್‌ನಲ್ಲಿ 3 ಕೆ.ಜಿ. ಅವಧಿ ಮೀರಿದ ಬೇಕರಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.

ತರಕಾರಿಗಳ ಮೇಲೆ ಫಂಗಸ್

ತಪಾಸಣೆ ವೇಳೆ ಕೆಲವು ಹೋಟೆಲ್‌ಗಳಲ್ಲಿ ಆಹಾರ ಸಂಗ್ರಹಣೆಯಲ್ಲೂ ಲೋಪ ಕಂಡುಬಂದಿದೆ. ಮಾಂಸಾಹಾರಿ ಮತ್ತು ಸಸ್ಯಾಹಾರಿ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸದೆ ಒಟ್ಟಿಗೆ ಇರಿಸಲಾಗಿತ್ತು. ಕೆಲವು ತರಕಾರಿಗಳ ಮೇಲೆ ಫಂಗಸ್‌ ಬೆಳೆದಿರುವುದು ಕಂಡುಬಂದಿದೆ.

ಅವಧಿ ಮೀರಿದ ಆಹಾರ ಬಳಕೆ, ಅನೈರ್ಮಲ್ಯ, ಸರಿಯಾದ ಲೇಬಲ್‌ ಇಲ್ಲದ ಉತ್ಪನ್ನಗಳ ಬಳಕೆ ಸೇರಿದಂತೆ ಆಹಾರ ಸುರಕ್ಷತಾ ನಿಯಮಗಳ ಹಲವು ಉಲ್ಲಂಘನೆಗಳು ಪತ್ತೆಯಾಗಿವೆ.

ಹೋಟೆಲ್‌ಗಳಿಗೆ ನೋಟಿಸ್

ನಿಯಮ ಉಲ್ಲಂಘನೆ ಕಂಡುಬಂದಿರುವ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಸಂಬಂಧಪಟ್ಟವರ ವಿರುದ್ಧ ನ್ಯಾಯ ನಿರ್ಣಾಯಕ ಅಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಜನರ ಆರೋಗ್ಯವೇ ಮುಖ್ಯ: ಯು.ಟಿ. ಖಾದರ್

ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿ, ಸ್ಟಾರ್‌ ಹೋಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಸಿಗುತ್ತದೆ ಎಂಬ ನಂಬಿಕೆಯಿಂದ ಜನರು ಅಲ್ಲಿಗೆ ಹೋಗುತ್ತಾರೆ. ಆದರೆ ತಪಾಸಣೆಯಲ್ಲಿ ಕಂಡುಬಂದ ವಾಸ್ತವಾಂಶವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಬಳಿಕ ಜನರೇ ನಿರ್ಧಾರ ಕೈಗೊಳ್ಳಲಿ. ಜನರ ಆರೋಗ್ಯ ರಕ್ಷಿಸುವುದೇ ಸರ್ಕಾರದ ಮುಖ್ಯ ಉದ್ದೇಶ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here