ಪ್ರತಿಕೂಲ ಹವಾಮಾನ; ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

0
4

ಜಮ್ಮು, ಆ.8: ಪ್ರತಿಕೂಲ ಹವಾಮಾನ ಹಾಗೂ ಮುಂದಿನ ದಿನಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಶನಿವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾತ್ರಿಕರ ಸಂಖ್ಯೆಯಲ್ಲೂ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಕಾಶ್ಮೀರ ಕಣಿವೆಯತ್ತ ಯಾವುದೇ ಹೊಸ ತಂಡದ ಯಾತ್ರಿಕರಿಗೆ ತೆರಳಲು ಅವಕಾಶ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹವಾಮಾನ ಪರಿಸ್ಥಿತಿಯನ್ನು ಆಡಳಿತ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿಗತಿಗಳನ್ನು ಆಧರಿಸಿ ಯಾತ್ರಿಕರ ಸಂಚಾರದ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ಸರ್ವಋತು ರಸ್ತೆ ಇದಾಗಿದೆ.

4.75 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ

ಜುಲೈ 3ರಂದು ಆರಂಭಗೊಂಡಿರುವ 57 ದಿನಗಳ ಅಮರನಾಥ ಯಾತ್ರೆಯಲ್ಲಿ ಈವರೆಗೆ 4.75 ಲಕ್ಷಕ್ಕೂ ಅಧಿಕ ಯಾತ್ರಿಕರು 3,880 ಮೀಟರ್ ಎತ್ತರದಲ್ಲಿರುವ ಪವಿತ್ರ ಅಮರನಾಥ ಗುಹಾ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ರಕ್ಷಾಬಂಧನದ ದಿನವಾದ ಆಗಸ್ಟ್ 28ರಂದು ಯಾತ್ರೆ ಮುಕ್ತಾಯಗೊಳ್ಳಲಿದೆ.

ಆ.11ರವರೆಗೆ ಮಳೆ ಎಚ್ಚರಿಕೆ

ಸ್ಥಳೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಜಮ್ಮು ಪ್ರದೇಶದ ಕೆಲವೆಡೆ ಭಾರಿ ಮತ್ತು ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 11ರವರೆಗೆ ಹಠಾತ್ ಪ್ರವಾಹ ಹಾಗೂ ಭೂಕುಸಿತದ ಅಪಾಯವೂ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಶನಿವಾರ ಬೆಳಗ್ಗೆ ಜಮ್ಮುವಿನಲ್ಲಿ ಲಘು-ಮಧ್ಯಮ ಮಳೆಯಾಗಿದ್ದರೂ, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here