ಬೆಂಗಳೂರು, ಜು.11: ರಸ್ತೆ, ಫುಟ್ಪಾತ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗಿರುವ ವಾಹನಗಳನ್ನು ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ವಾಹನಗಳನ್ನು ಗುರುತಿಸುವುದು, ಮಾಲೀಕರಿಗೆ ನೋಟಿಸ್ ನೀಡುವುದು, ಟೋಯಿಂಗ್ ಮಾಡುವುದು ಹಾಗೂ ಅಂತಿಮವಾಗಿ ವಿಲೇವಾರಿ ಮಾಡುವ ಕುರಿತು ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.
ನಗರ ಪಾಲಿಕೆ, ಸಂಚಾರ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಲಿದ್ದಾರೆ. ಹಲವು ತಿಂಗಳುಗಳಿಂದ ರಸ್ತೆ ಬದಿಯಲ್ಲಿ ಬಿಟ್ಟುಹೋಗಿರುವ ವಾಹನಗಳಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಪಾದಚಾರಿಗಳ ಓಡಾಟಕ್ಕೂ ಅಡ್ಡಿಯಾಗುತ್ತಿದ್ದು, ಕೆಲವೆಡೆ ಕಸ ಹಾಕುವ ಸ್ಥಳಗಳಾಗಿವೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮಾರ್ಗಸೂಚಿಯ ಪ್ರಕಾರ, ಮೊದಲು ಸಂಚಾರ ಪೊಲೀಸರು ಪರಿತ್ಯಕ್ತ ವಾಹನಗಳನ್ನು ಗುರುತಿಸಿ, ವಾಹನದ ಫೋಟೋ, ನೋಂದಣಿ ಸಂಖ್ಯೆ ಹಾಗೂ ಇತರೆ ವಿವರಗಳನ್ನು ದಾಖಲಿಸಲಿದ್ದಾರೆ. ಬಳಿಕ ನಗರ ಪಾಲಿಕೆ ಮತ್ತು ಆರ್ಟಿಒ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ವಾಹನದ ಮಾಲೀಕರಿಗೆ ಏಳು ದಿನಗಳೊಳಗೆ ವಾಹನ ತೆರವುಗೊಳಿಸುವಂತೆ ನೋಟಿಸ್ ನೀಡಲಾಗುತ್ತದೆ.
ಏಳು ದಿನಗಳಾದರೂ ವಾಹನ ತೆರವುಗೊಳಿಸದಿದ್ದರೆ ಅದನ್ನು ಟೋಯಿಂಗ್ ವಾಹನದ ಮೂಲಕ ನಿಗದಿತ ಸ್ಥಳಕ್ಕೆ ಕೊಂಡೊಯ್ಯಲಾಗುತ್ತದೆ. ವಾಹನವನ್ನು ಮರಳಿ ಪಡೆಯಲು ದ್ವಿಚಕ್ರ ವಾಹನಕ್ಕೆ ₹650 ಹಾಗೂ ನಾಲ್ಕು ಚಕ್ರ ವಾಹನಕ್ಕೆ ₹1,000 ಟೋಯಿಂಗ್ ಶುಲ್ಕ ಪಾವತಿಸಬೇಕು.
ಟೋಯಿಂಗ್ ಮಾಡಿದ ವಾಹನಗಳ ವಿವರವನ್ನು ನಗರ ಪಾಲಿಕೆಯ ವೆಬ್ಸೈಟ್, ಸೂಚನಾ ಫಲಕ ಹಾಗೂ ಒಂದು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. 15 ದಿನಗಳೊಳಗೆ ಯಾರೂ ಹಕ್ಕು ಮಂಡಿಸದಿದ್ದರೆ, ವಾಹನ ಸ್ಕ್ರ್ಯಾಪ್ ನೀತಿ–2021ರ ಪ್ರಕಾರ ವಾಹನವನ್ನು ವಿಲೇವಾರಿ ಮಾಡಲಾಗುತ್ತದೆ.
ಸಾರ್ವಜನಿಕರು ರಸ್ತೆಗಳಲ್ಲಿ ಬಿಟ್ಟುಹೋಗಿರುವ ವಾಹನಗಳ ಮಾಹಿತಿ ಬಿಟಿಪಿ–ಆಸ್ಟ್ರಮ್ (BTP-ASTraM) ಮೊಬೈಲ್ ಆ್ಯಪ್ನ ‘ಪಬ್ಲಿಕ್ ಐ‘ ಸೌಲಭ್ಯದ ಮೂಲಕ ನೀಡಬಹುದು. ಮಾಹಿತಿ ಬಂದ ಬಳಿಕ ಸಂಚಾರ ಪೊಲೀಸರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಟೋಯಿಂಗ್ ಮಾಡಿದ ವಾಹನಗಳನ್ನು ಇರಿಸಲು ಏಳು ಸ್ಥಳಗಳನ್ನು ಗುರುತಿಸಿದ್ದು, ಉತ್ತರ ನಗರ ಪಾಲಿಕೆಯು ಕೋಗಿಲು ಪ್ರದೇಶದಲ್ಲಿ ಸಂಗ್ರಹ ಕೇಂದ್ರವನ್ನು ಸಿದ್ಧಪಡಿಸಿದೆ.




