ಜಪಾನ್‌ನಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ!

0
4

ಟೊಕಿಯೋ, ಏ.20: ಜಪಾನ್‌ನ ಈಶಾನ್ಯ ಹಾಗೂ ಉತ್ತರ ಭಾಗಗಳಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಹಿನ್ನೆಲೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಭೂಕಂಪದ ತೀವ್ರತೆ 7.5 ರಷ್ಟಾಗಿದ್ದು, ಇದರ ಪರಿಣಾಮ ಕರಾವಳಿ ಭಾಗಗಳಲ್ಲಿ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗಿದೆ. ಇವಾಟೆ ಪ್ರಿಫೆಕ್ಚರ್‌ನ ಕುಜಿ ಬಂದರಿನಲ್ಲಿ ಸುಮಾರು 80 ಸೆಂ.ಮೀ ಎತ್ತರದ ಸುನಾಮಿ ಅಲೆ ದಾಖಲಾಗಿದ್ದು, ಮುಂದಿನ ಗಂಟೆಗಳಲ್ಲಿ ಇನ್ನಷ್ಟು ಪ್ರಭಾವ ಕಾಣಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಸ್ಥಳೀಯ ಕಾಲಮಾನ ಸಂಜೆ ವೇಳೆ ಸಂಭವಿಸಿದ ಈ ಕಂಪನದಿಂದ ದೂರದಲ್ಲಿರುವ ಟೊಕಿಯೋ ನಗರದಲ್ಲಿಯೂ ಕಟ್ಟಡಗಳು ಅಲುಗಾಡಿದ್ದು, ಜನರಲ್ಲಿ ಆತಂಕ ಉಂಟಾಗಿದೆ.

ಇವಾಟೆ, ಅಮೋರಿ ಹಾಗೂ ಹೊಕ್ಕೈಡೋ ಕರಾವಳಿ ಭಾಗಗಳಿಗೆ ಮೂರು ಮೀಟರ್‌ವರೆಗೆ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ. ಕರಾವಳಿ ಮತ್ತು ನದಿ ತೀರ ಪ್ರದೇಶದ ನಿವಾಸಿಗಳು ತಕ್ಷಣವೇ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಸುನಾಮಿ ಅಲೆಗಳು ಪದೇಪದೇ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಹಿಂತೆಗೆದುಕೊಳ್ಳುವವರೆಗೆ ಸುರಕ್ಷಿತ ಸ್ಥಳಗಳನ್ನು ಬಿಡಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಪ್ರಬಲ ಕಂಪನಗಳ ಸಂಭವ ಸಾಧ್ಯತೆ ಇರುವುದಾಗಿ ಮುನ್ನೆಚ್ಚರಿಕೆ ನೀಡಲಾಗಿದೆ.

LEAVE A REPLY

Please enter your comment!
Please enter your name here