
ಕಾವು, ಮಾ.26: ಪುತ್ತೂರು–ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಈಶ್ವರಮಂಗಲ ಜಂಕ್ಷನ್‌ನಲ್ಲಿರುವ ಕಾವು ಬಸ್ಸು ತಂಗುದಾಣವು ದ್ವಿಚಕ್ರ ವಾಹನಗಳ ಪಾರ್ಕಿಂಗ್ ಕೇಂದ್ರವಾಗಿ ಮಾರ್ಪಟ್ಟಿದ್ದು, ಪ್ರಯಾಣಿಕರಿಗೆ ಗಂಭೀರ ತೊಂದರೆ ಉಂಟಾಗುತ್ತಿದೆ.
ತಂಗುದಾಣದ ಎದುರುಗಡೆ ಸಾಲುಸಾಲಾಗಿ ಬೈಕ್‌ಗಳನ್ನು ನಿಲ್ಲಿಸಿರುವ ಪರಿಣಾಮ, ಪ್ರಯಾಣಿಕರಿಗೆ ತಂಗುದಾಣದೊಳಗೆ ಪ್ರವೇಶಿಸುವುದೇ ಕಷ್ಟಕರವಾಗಿದೆ. ಸರಿಯಾದ ನಿಲುಗಡೆ ವ್ಯವಸ್ಥೆಯ ಕೊರತೆಯಿಂದ ಪ್ರಯಾಣಿಕರು ಅಸೌಕರ್ಯ ಅನುಭವಿಸುತ್ತಿದ್ದು, ವಾಹನ ದಟ್ಟಣೆಯ ನಡುವೆ ಸುರಕ್ಷತೆ ಪ್ರಶ್ನಾರ್ಹವಾಗಿದೆ.

ಪ್ರತಿದಿನ ನೂರಾರು ಮಂದಿ ಈ ತಂಗುದಾಣವನ್ನು ಬಳಸುತ್ತಿದ್ದು, ದ್ವಿಚಕ್ರ ವಾಹನಗಳ ಅಕ್ರಮ ಪಾರ್ಕಿಂಗ್‌ನಿಂದ ಪ್ರಯಾಣಿಕರು ರಸ್ತೆಯಲ್ಲೇ ನಿಂತು ಬಸ್ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಪಘಾತದ ಭೀತಿಯೂ ಹೆಚ್ಚಾಗಿದೆ.
ಈ ಸಮಸ್ಯೆ ಬಗ್ಗೆ ಪದೇ ಪದೇ ವರದಿಯಾಗುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.
ತಕ್ಷಣವೇ ದ್ವಿಚಕ್ರ ವಾಹನಗಳಿಗೆ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ತಂಗುದಾಣವನ್ನು ಮುಕ್ತಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.





