ಹಿಮಗ್ರಾಮವಾದ ಮಾಚಾಪುರ: ಧಾರವಾಡದಲ್ಲಿ ಭಾರೀ ಆಲಿಕಲ್ಲು ಮಳೆ!

0
28

ಧಾರವಾಡ, ಮಾ.18: ಜಿಲ್ಲೆಯ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದಲ್ಲಿ ಮಂಗಳವಾರ ಅಪರೂಪದ ಭಾರೀ ಆಲಿಕಲ್ಲು ಮಳೆ ಸುರಿದು, ಗ್ರಾಮವೆಲ್ಲ ಕ್ಷಣಾರ್ಧದಲ್ಲಿ ಬಿಳಿ ಹೊದಿಕೆಯಿಂದ ಆವೃತವಾಗಿ ‘ಕಾಶ್ಮೀರ’ದಂತಾಗಿ ಬದಲಾಗಿದ ಘಟನೆ ನಡೆದಿದೆ.

ಎರಡು ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸುರಿದ ಮಳೆ ಮತ್ತು ಆಲಿಕಲ್ಲುಗಳಿಂದ ರಸ್ತೆಗಳಲ್ಲಿ ಹಾಗೂ ಮನೆಗಳ ಮೇಲ್ಚಾವಣಿಗಳ ಮೇಲೆ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದವು. ಮಳೆ ನಿಂತ ಬಳಿಕ ಗ್ರಾಮಸ್ಥರು ಮನೆಗಳಿಂದ ಹೊರಬಂದು ಈ ವಿಶಿಷ್ಟ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು. ರಸ್ತೆಗಳು ಹಿಮಪಾತವಾದಂತೆ ಕಂಗೊಳಿಸಿದ ದೃಶ್ಯ ಜನರನ್ನು ಆಶ್ಚರ್ಯಚಕಿತರನ್ನಾಗಿಸಿತು.

ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಡಾ. ಸಿ.ಎಸ್. ಪಾಟೀಲ್ ಮಾತನಾಡಿ, “ಸ್ಥಳೀಯ ಮಟ್ಟದಲ್ಲಿ ಉಂಟಾದ ತೀವ್ರ ಗಾಳಿಚಲನೆ, ಉಷ್ಣತೆ ಮತ್ತು ತೇವಾಂಶದ ಸಂಯೋಜನೆಯಿಂದ ಈ ರೀತಿಯ ಆಲಿಕಲ್ಲು ಮಳೆ ಸಂಭವಿಸಿದೆ. ಮಾನ್ಸೂನ್ ಪೂರ್ವ ಅವಧಿಯಲ್ಲಿ ಇಂತಹ ಘಟನೆಗಳು ಸಾಮಾನ್ಯ,” ಎಂದು ತಿಳಿಸಿದ್ದಾರೆ. ಉತ್ತರ ಒಳನಾಡಿನಲ್ಲಿ ಗಾಳಿಯ ವ್ಯತ್ಯಾಸ ಹಾಗೂ ವಾಯುಭಾರ ಕುಸಿತವೂ ಈ ಮಳೆಯ ತೀವ್ರತೆಗೆ ಕಾರಣವಾಗಿದೆ ಎಂದು ಅವರು ವಿವರಿಸಿದರು.

ಆದರೆ ಪ್ರಕೃತಿಯ ಈ ವಿಸ್ಮಯ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಕೊಯ್ಲಿಗೆ ಸಿದ್ಧವಾಗಿದ್ದ ಟೊಮಾಟೊ ಬೆಳೆ ಸಂಪೂರ್ಣ ಹಾನಿಯಾಗಿದ್ದು, ತೋಟಗಾರಿಕೆ ಬೆಳೆಗಳು ಹಾಗೂ ಸಸಿಗಳು ಕೂಡ ನಾಶವಾಗಿವೆ. ಭಾರೀ ಮಳೆ ರೈತರಿಗೆ ದೊಡ್ಡ ಹೊಡೆತ ನೀಡಿದಂತಾಗಿದೆ.

ಇನ್ನೂ ಮಳೆಯಿಂದಾಗಿ ಕೆಲ ಮನೆಗಳ ಮೇಲ್ಚಾವಣಿಗಳಿಗೆ ಹಾನಿ ಉಂಟಾಗಿದ್ದು, ರೈತರು ಹಾಗೂ ಗ್ರಾಮಸ್ಥರು ಸ್ಥಳೀಯ ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹಾನಿ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳನ್ನು ಅಧಿಕಾರಿಗಳಿಗೆ ಹಂಚಲಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here