ಪಶ್ಚಿಮ ಬಂಗಾಳ ರಾಜಕೀಯದ ಹಿರಿಯ ನಾಯಕ-ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ನಿಧನ!

0
3
Advertisement

ಕೊಲ್ಕೋತಾ, ಫೆ.23:ಮಾಜಿ ರೈಲ್ವೆ ಸಚಿವ ಹಾಗೂ ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಎರಡನೇ ಕಮಾಂಡರ್ ಎಂದೇ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿ ಮುಕುಲ್ ರಾಯ್ ಅವರು ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೆಳಗಿನ ಜಾವ 1.30ರ ಸುಮಾರಿಗೆ ಕೊನೆಯುಸಿರೆಳೆದರು.

ಬಹು ಕಾಯಿಲೆಗಳಿಂದ ಬಳಲುತ್ತಿದ್ದ ಮುಕುಲ್ ರಾಯ್ ಅವರು ಕಳೆದ ಕೆಲವು ದಿನಗಳಿಂದ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದಕ್ಕೂ ಮುನ್ನ ನೆನಪಿನ ಶಕ್ತಿಯಲ್ಲೂ ಕುಂದಾಟ ಕಂಡುಬಂದಿತ್ತು. ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಹಲವು ದೈಹಿಕ ತೊಂದರೆಗಳಿಂದ ಬಳಲುತ್ತಿದ್ದ ಅವರು ಪದೇಪದೇ ಆಸ್ಪತ್ರೆಗೆ ದಾಖಲಾಗಬೇಕಾಗುತ್ತಿತ್ತು.

ಒಂದು ಕಾಲದಲ್ಲಿ ‘ಬಂಗಾಳ ರಾಜಕೀಯದ ಚಾಣಕ್ಯ’ ಎಂದು ಕರೆಯಲ್ಪಟ್ಟಿದ್ದ ಮುಕುಲ್ ರಾಯ್, ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ತೃಣಮೂಲಕಾಂಗ್ರೆಸ್ ಪಕ್ಷದ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದು, ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿಯೂ ಗುರುತಿಸಿಕೊಂಡಿದ್ದರು.

ರಾಜಕೀಯ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡ ಮುಕುಲ್ ರಾಯ್, ಎರಡನೇ ಯುಪಿಎ ಸರ್ಕಾರ ಅವಧಿಯಲ್ಲಿ ಶಿಪ್ಪಿಂಗ್ ಸಚಿವಾಲಯ ಹಾಗೂ ನಂತರ ರೈಲ್ವೆ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ತೃಣಮೂಲ ಕಾಂಗ್ರೆಸ್ ಸ್ಥಾಪನೆಯಾಗುವ ಮುನ್ನ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು. 2017ರಿಂದ 2021ರ ಅವಧಿಯಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರಿದ್ದರು. 1998ರಲ್ಲಿ ಮಮತಾ ಬ್ಯಾನರ್ಜಿ ಅವರೊಂದಿಗೆ ತೃಣಮೂಲ ಕಾಂಗ್ರೆಸ್ ಸ್ಥಾಪಿಸಿದ ನಂತರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದ ಅವರ ರಾಜಕೀಯ ಪಯಣ ಗಮನಾರ್ಹವಾಗಿತ್ತು.

ಮುಕುಲ್ ರಾಯ್ ಅವರ ನಿಧನಕ್ಕೆ ರಾಜಕೀಯ ವಲಯದ ಹಲವು ನಾಯಕರು ಸಂತಾಪ ಸೂಚಿಸಿದ್ದು, ಬಂಗಾಳ ರಾಜಕೀಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here