ಇರಾನ್ ನಲ್ಲಿ ಮುಂದುವರಿದ ಹಿಂಸಾಚಾರ;ಅಮೇರಿಕನ್ನರಿಗೆ ತಾಯ್ನಾಡಿಗೆ ಮರಳಲು ಟ್ರಂಪ್ ಸೂಚನೆ!

0
21
Advertisement

ಟೆಹ್ರಾನ್, ಜ.14 : ಇರಾನ್‌ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಇರಾನ್‌ನ ಪ್ರತಿಭಟನಾಕಾರರು ಹಾಗೂ ಆಡಳಿತಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಅಶಾಂತಿಯ ವಾತಾವರಣದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಇರುವ ಅಮೇರಿಕನ್ನರು ತಕ್ಷಣವೇ ದೇಶ ತೊರೆಯುವಂತೆ ಟ್ರಂಪ್ ಆಡಳಿತ ಸೂಚಿಸಿದೆ. ರಾಯಿಟರ್ಸ್ ವರದಿಯಂತೆ, ಈವರೆಗೂ ನಡೆದ ಹಿಂಸಾಚಾರದಲ್ಲಿ ಸುಮಾರು 2,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ವಿರುದ್ಧ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಇರಾನ್‌ನ ಹಿರಿಯ ನಾಯಕ ಅಲಿ ಲಾರಿಜಾನಿ ಪ್ರತಿಕ್ರಿಯಿಸಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನಿನ ಜನರ ಸಾವಿಗೆ ಹೊಣೆಗಾರರು ಎಂದು ಆರೋಪಿಸಿದರು. ಇದಕ್ಕೆ ತಿರುಗೇಟು ನೀಡಿದ ಅಮೆರಿಕ, ಇರಾನಿನ ಸರ್ಕಾರವೇ ತನ್ನ ಜನರಿಗೆ ಉತ್ತಮ ಜೀವನವನ್ನು ಒದಗಿಸಲು ವಿಫಲವಾಗಿರುವುದರಿಂದ ಜನರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದೆ.

ಇರಾನ್ ಆಡಳಿತವು ದಶಕಗಳಿಂದ ಆರ್ಥಿಕತೆ, ಕೃಷಿ, ನೀರು ಸರಬರಾಜು ಹಾಗೂ ವಿದ್ಯುತ್‌ನಂತಹ ಪ್ರಮುಖ ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದು, ದೇಶದ ಸಂಪತ್ತನ್ನು ಭಯೋತ್ಪಾದಕ ಪ್ರಾಕ್ಸಿಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಸಂಶೋಧನೆಗೆ ವ್ಯಯಿಸಿದೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿದೆ. ಇರಾನ್ ಜನರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದ್ದು, ದಿನನಿತ್ಯದ ಜೀವನ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಅಮೇರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ಪ್ರತಿಭಟನಾಕಾರರು ಉತ್ತಮ ಜೀವನಕ್ಕೆ ಅರ್ಹರಾಗಿದ್ದು, ಅವರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಎಂದು ಒತ್ತಿ ಹೇಳಿರುವ ವಿದೇಶಾಂಗ ಇಲಾಖೆ, ಈ ಆಕ್ರೋಶವು ಪ್ರಸ್ತುತ ಆಡಳಿತದ ವಿರುದ್ಧ ಇರುವ ದೀರ್ಘಕಾಲದ ಅಸಮಾಧಾನ ಹಾಗೂ ಕುಂದುಕೊರತೆಗಳಿಂದಲೇ ಹುಟ್ಟಿಕೊಂಡಿದೆ ಎಂದು ಸ್ಪಷ್ಟಪಡಿಸಿದೆ.

ಇದೀಗ ಖಮೇನಿ ಸರ್ಕಾರವು ಕಠಿಣ ಕ್ರಮಗಳ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾಗಿದ್ದು, ಅದರಿಂದಲೇ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.

Advertisement

LEAVE A REPLY

Please enter your comment!
Please enter your name here