
ಬೆಂಗಳೂರು, ಡಿ.29: ಕರ್ನಾಟಕ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಬಾಕಿ ಕಂತಿನ ಹಣ ತಾಂತ್ರಿಕ ಕಾರಣಗಳಿಂದ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಮಹಿಳೆಯರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು, ಸರಕಾರ ‘181’ ಸಹಾಯವಾಣಿಯನ್ನು ಆರಂಭಿಸಿದೆ.
ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸುಮಾರು 5500 ಕೋಟಿ ರೂಪಾಯಿಗಳಷ್ಟು ಹಣ ಫಲಾನುಭವಿಗಳಿಗೆ ಇನ್ನೂ ಪಾವತಿಯಾಗಿಲ್ಲ. ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿಯೂ ಈ ಬಗ್ಗೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಸದನ ಮುಗಿದು ವಾರ ಕಳೆದರೂ ಹಣ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ.
ಸರ್ಕಾರವು ಬಾಕಿ ಹಣವನ್ನು ಪಾವತಿಸಲು ಸತತ ಪ್ರಯತ್ನ ನಡೆಸುತ್ತಿದೆ. ಆದರೆ, ಬೃಹತ್ ಮೊತ್ತದ ಹಣದ ಹರಿವು ಮತ್ತು ತಾಂತ್ರಿಕ ಕಾರಣಗಳಿಂದಾಗಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರಿಂದಾಗಿ ಪ್ರತಿ ತಿಂಗಳು 2000 ರೂಪಾಯಿ ನಂಬಿಕೊಂಡಿದ್ದ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಗೃಹಲಕ್ಷ್ಮೀ ಫಲಾನುಭವಿಗಳು 181 ಕ್ಕೆ ಕರೆ ಮಾಡಿದರೆ, ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ತಾಲೂಕಿನ ಮಾಹಿತಿ ಪಡೆದು ಸಮಸ್ಯೆಗೆ ಇರುವ ಕಾರಣ ಮತ್ತು ಪರಿಹಾರದ ಬಗ್ಗೆ ಮಾಹಿತಿ ನೀಡಲಿದ್ದಾರೆ.





