ಬಂದರೋ ಬಂದರೋ ಬಾವ ಬಂದರೋ’ ಹಾಡಿಗೆ ಭಾವಿ ದಂಪತಿಯ ಭರ್ಜರಿ ನೃತ್ಯ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಕೊಡಗು ಮೂಲದ ರೋಷನ್ ಜೊತೆ ಆಗಸ್ಟ್ 28ರಂದು ಹಸೆಮಣೆ ಏರಲಿದ್ದಾರೆ. ಹಳದಿ ಶಾಸ್ತ್ರದ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆಗಸ್ಟ್ 28ರ ಗುರುವಾರ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರ ಮದುವೆ ಆಹ್ವಾನ ಪತ್ರಿಕೆಯನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮದುವೆಗೆ ಮುನ್ನಾದಿನ ನಡೆದ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಹಳದಿ ಉಡುಪಿನಲ್ಲಿ ಮಿಂಚಿದ ಭಾವಿ ದಂಪತಿಗಳ ಸುತ್ತ ಸೂರ್ಯಕಾಂತಿ ಹೂವಿನ ಅಲಂಕಾರ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದೆ. ಈ ವೇಳೆ ಅನುಶ್ರೀ–ರೋಷನ್ ‘ಸು ಫ್ರಂ ಸೋ’ ಚಿತ್ರದ ‘ಬಂದರೋ ಬಂದರೋ ಬಾವ ಬಂದರೋ’ ಹಾಡಿಗೆ ಕುಣಿದು ಎಲ್ಲರ ಮನ ಸೆಳೆದಿದ್ದಾರೆ.

ಗುರುವಾರ ಬೆಳಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ ಮತ್ತು ರೋಷನ್ ವಿವಾಹವಾಗಲಿದ್ದಾರೆ. ಈ ಮದುವೆ ಬೆಂಗಳೂರು ಹೊರವಲಯದ ಕಗ್ಗಲಿಪುರದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಜರುಗಲಿದೆ.

ಉದ್ಯಮಿ ರೋಷನ್ ಜೊತೆ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೂರ್ಗ್ ಮೂಲದ ರೋಷನ್ ತಂದೆ ರಾಮಮೂರ್ತಿ ಮತ್ತು ತಾಯಿ ಸಿಸಿಲಿಯಾ. ಈ ಸಂಬಂಧವನ್ನು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದು ಹೇಳಲಾಗುತ್ತಿದೆ.

ಕನ್ನಡದಲ್ಲಿ ಹೆಚ್ಚು ಬೇಡಿಕೆಯ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಅನುಶ್ರೀ ಅವರ ಮದುವೆ ಕುರಿತು ಅಭಿಮಾನಿಗಳಲ್ಲಿ ಬಹಳ ಕುತೂಹಲವಿತ್ತು. ಅವರು ಎಲ್ಲಿಗೆ ಹೋದರೂ ‘ಮದುವೆ ಯಾವಾಗ?’ ಎಂಬ ಪ್ರಶ್ನೆ ಅಭಿಮಾನಿಗಳಿಂದ ಮಾತ್ರವಲ್ಲ, ನಟ-ನಟಿಯರಿಂದಲೂ ಕೇಳಿಬರುತ್ತಿತ್ತು.

ಆಗಲೆಲ್ಲಾ ಫನ್ನಿಯಾಗಿ ಉತ್ತರಿಸುತ್ತಿದ್ದ ಅನುಶ್ರೀ, ಇತ್ತೀಚೆಗೆ ‘ಈ ವರ್ಷ ಮದುವೆಯಾಗುತ್ತೇನೆ’ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸುದ್ದಿ ಅಭಿಮಾನಿಗಳಿಗೆ ಸಂತಸ ತಂದಿದೆ.

ರಿಯಾಲಿಟಿ ಶೋಗಳ ನಿರೂಪಣೆಯಿಂದ ಖ್ಯಾತಿ ಗಳಿಸಿದ ಅನುಶ್ರೀ, ‘ಬಿಗ್ ಬಾಸ್’ ಸ್ಪರ್ಧಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಲ್ಲದೆ ನಟಿಯಾಗಿಯೂ ತಮ್ಮ ಪ್ರತಿಭೆಯನ್ನು ತೋರಿಸಿ, ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
