ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಹಸಿರು ನಿಶಾನೆ ಗೊಂದಲಗಳಿಗೆ ತೆರೆ ಎಳೆದ ಕರ್ನಾಟಕ ಹೈಕೋರ್ಟ್

0
121
Bike Taxi Karnataka

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಹೈಕೋರ್ಟ್ ಅನುಮತಿ ನೀಡಿದೆಯೆಂದು ಸುದ್ದಿಗಳು ಹರಿದಾಡುತ್ತಿದ್ದವು. ಇದರಿಂದ ಚಾಲಕರು ಹಾಗೂ ಸಾರ್ವಜನಿಕರಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಬೈಕ್ ಟ್ಯಾಕ್ಸಿ ಕುರಿತ ಎಲ್ಲ ಗೊಂದಲಗಳಿಗೆ ಇದೀಗ ಸ್ವತಃ ಹೈಕೋರ್ಟ್ ಸ್ಪಷ್ಟನೆ ನೀಡಿದೆ. ಹಾಗಾದರೆ ಹೈಕೋರ್ಟ್ ಏನು ಹೇಳಿದೆ? ತಿಳಿಯಲು ಮುಂದುವರಿಸಿ ಓದಿ.

ಬೆಂಗಳೂರು, ಆಗಸ್ಟ್ 22: ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಬೈಕ್ ಟ್ಯಾಕ್ಸಿ (Bike Taxi Services) ಕಾರ್ಯಾಚರಣೆಯ ನಿಷೇಧ ಕುರಿತಾಗಿ ಉಂಟಾಗಿದ್ದ ಗೊಂದಲಗಳಿಗೆ ಇದೀಗ ಹೈಕೋರ್ಟ್ ತೆರೆ ಎಳೆದಿದೆ. ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವಂತೆ ಹೈಕೋರ್ಟ್ ಆದೇಶಿಸಿಲ್ಲ ಎಂದು ಸಿಜೆ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ಪೀಠ ಸ್ಪಷ್ಟಪಡಿಸಿದೆ. ಇದರಿಂದ, ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲಾಗಿದೆ ಎಂಬ ಸುದ್ದಿಗೆ ತೆರೆ ಬಿದ್ದಿದ್ದು, ನಿಷೇಧ ಸಂಬಂಧಿಸಿದ ವಿಚಾರಣೆ ಇನ್ನೂ ಕೋರ್ಟ್‌ನಲ್ಲಿ ಮುಂದುವರಿದಿದೆ. ಹೀಗಾಗಿ ಮುಂದಿನ ತೀರ್ಪು ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠದಲ್ಲಿ ಇಂದು ವಿಚಾರಣೆ ನಡೆಯಿತು. ಈ ವೇಳೆ ರಾಜ್ಯದಲ್ಲಿ ನಿಷೇಧವಿರುವುದಾದರೂ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ತಿಳಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವ ಯಾವುದೇ ಆದೇಶವನ್ನು ಹೈಕೋರ್ಟ್ ಹೊರಡಿಸಿಲ್ಲವೆಂದು ಸ್ಪಷ್ಟಪಡಿಸಿದೆ. ಬೈಕ್ ಟ್ಯಾಕ್ಸಿ ಪ್ರಸ್ತಾವನೆ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿರುವುದರಿಂದ, ಬೈಕ್ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಮಾತ್ರ ನಾವು ಹೇಳಿದ್ದೇವೆ. ಆದರೆ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಕಂಪನಿಗಳ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಕೋರ್ಟ್ ತಿಳಿಸಿದೆ.

ಇದರ ಜೊತೆಗೆ, ಬೈಕ್ ಟ್ಯಾಕ್ಸಿ ಚಾಲಕರ ಪರ ವಕೀಲ ಗಿರೀಶ್ ಕುಮಾರ್ ವಾದ ಮಂಡಿಸಿದರು. ಸರ್ಕಾರಕ್ಕೆ ಅಪ್ಲಿಕೇಶನ್ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರವಿದೆ, ಆದರೆ ಆ ಅಪ್ಲಿಕೇಶನ್ ಆಧರಿಸಿ ಸೇವೆ ನೀಡುವ ಚಾಲಕರ ಮೇಲೆ ಕ್ರಮಕೈಗೊಳ್ಳುವುದು ಸರಿಯಲ್ಲ. ಚಾಲಕರ ಬೈಕ್‌ಗಳನ್ನು ಸೀಜ್ ಮಾಡಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಈ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಈ ಆರೋಪಗಳು ತತ್ವಸಂಗತವಲ್ಲ, ನಾವು ಯಾರನ್ನೂ ಬಂಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಹೈಕೋರ್ಟ್, ವ್ಯಕ್ತಿಗಳಿಗೆ ತೊಂದರೆ ನೀಡಬಾರದು ಎಂದು ತಿಳಿಸಿತು. ಜೊತೆಗೆ, ಬೈಕ್ ಟ್ಯಾಕ್ಸಿ ಕುರಿತು ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸುವಂತೆ ಸೂಚಿಸಿ, ನಾಲ್ಕು ವಾರಗಳ ಅವಧಿ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ.

LEAVE A REPLY

Please enter your comment!
Please enter your name here