
Chandrasekharanath Swamiji passes away: ವಿಶ್ವ ಒಕ್ಕಲಿಗ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ವಯೋಸಹಜ ಅನಾರೋಗ್ಯದಿಂದ ಮಧ್ಯರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕೆಂಗೇರಿ ಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಮಧ್ಯಾಹ್ನ 3 ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ.
ಬೆಂಗಳೂರು, ಆಗಸ್ಟ್ 16: ಬೆಂಗಳೂರಿನ ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಚಂದ್ರಶೇಖರನಾಥ ಶ್ರೀ (81) ಅವರು ವಯೋಸಹಜ ಕಾಯಿಲೆಯಿಂದ ತಡರಾತ್ರಿ 12.01ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಮಧ್ಯಾಹ್ನ 3 ಗಂಟೆಗೆ ನಿಶ್ಚಲಾನಂದನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದ್ದು, ಭಕ್ತರು ಹಾಗೂ ಸಾರ್ವಜನಿಕರು ಕೆಂಗೇರಿಯ ಮಠದ ಆವರಣದಲ್ಲಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಚಂದ್ರಶೇಖರನಾಥ ಸ್ವಾಮೀಜಿಗಳು ಶ್ರೀಮಠವನ್ನು ಸ್ಥಾಪಿಸಿ, ಶಿಕ್ಷಣ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ನಿಧನದ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಸೇರಿದಂತೆ ಅನೇಕ ಗಣ್ಯರು ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: ಖಾಸಗಿ ವಾಹನಗಳಿಗೆ ₹3000ಕ್ಕೆ FASTag ವಾರ್ಷಿಕ ಪಾಸ್
ಡಿಕೆ ಶಿವಕುಮಾರ್ ಸಂತಾಪ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, “ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಮಠಾಧೀಶರಾದ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿ ಅವರು ಭೈರವೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ಬೇಸರವಾಯಿತು. ಪೂಜ್ಯ ಸ್ವಾಮೀಜಿಗಳು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ” ಎಂದು ತಿಳಿಸಿದ್ದಾರೆ.
‘ಅವರ ದಿವ್ಯ ಆತ್ಮಕ್ಕೆ ಪರಮಾತ್ಮನು ಶಾಂತಿಯನ್ನು ನೀಡಲಿ. ಈ ಅಗಲಿಕೆಯ ದುಃಖವನ್ನು ಭರಿಸಲು ದೇವರು ಅವರ ಭಕ್ತವೃಂದಕ್ಕೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಹೆಚ್.ಡಿ. ದೇವೇಗೌಡ ಸಂತಾಪ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, “ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಸಂಸ್ಥಾಪಕ ಪೀಠಾಧ್ಯಕ್ಷರಾದ ಪರಮಪೂಜ್ಯ ಚಂದ್ರಶೇಖರನಾಥ ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ಆಳವಾದ ದುಃಖವಾಯಿತು” ಎಂದು ಹೇಳಿದ್ದಾರೆ.
‘ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ ಪೂಜ್ಯ ಗುರುಗಳಿಗೆ ಭಗವಂತನು ಸದ್ಗತಿಯನ್ನು ನೀಡಲಿ. ಅವರ ಅಗಲಿಕೆಯ ನೋವನ್ನು ತಾಳುವ ಶಕ್ತಿಯನ್ನು ಅಪಾರ ಸಂಖ್ಯೆಯ ಭಕ್ತರಿಗೆ ದೇವರು ಕರುಣಿಸಲಿ’ ಎಂದು ಹೇಳಿದ್ದಾರೆ.





