ಪ್ರಧಾನಿ ಮೋದಿ ನಾಯಕತ್ವಕ್ಕೆ ಮೋಹನ್ ಲಾಲ್ ಪ್ರಶಂಸೆ

0
60

ಕೊಚ್ಚಿ, ಮಾ.13: ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಕಲಾವಿದರು ಮತ್ತು ಸೃಜನಶೀಲರನ್ನು ಗೌರವಿಸುವ ನಿಜವಾದ ಮುತ್ಸದ್ದಿ ಹಾಗೂ ದೂರದೃಷ್ಟಿಯುಳ್ಳ ನಾಯಕರು ಎಂದು ಅವರು ಮೋದಿ ಅವರನ್ನು ಬಣ್ಣಿಸಿದ್ದಾರೆ.

ಕೇಂದ್ರ ಸರ್ಕಾರದ ನಾಗರಿಕ ಸಂವಹನ ವೇದಿಕೆ ‘ಮೈಗೌಇಂಡಿಯಾ’ ವತಿಯಿಂದ ನಡೆಸುವ ಜಿಡಿಪಿ@ಮೈಗೌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮೋಹನ್ ಲಾಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಹಲವು ಬಾರಿ ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದು ಹೇಳಿದ ಅವರು, ಪ್ರತಿ ಭೇಟಿಯಲ್ಲೂ ನಿಜವಾದ ಮುತ್ಸದ್ದಿ, ದೃಢ ಹಾಗೂ ದೂರದೃಷ್ಟಿಯುಳ್ಳ ನಾಯಕನನ್ನು ಭೇಟಿಯಾದ ಅನುಭವ ತಮಗಾಗಿದೆ ಎಂದು ತಿಳಿಸಿದ್ದಾರೆ.

“ನಮ್ಮ ರಾಷ್ಟ್ರದ ಬಗ್ಗೆ ಅವರಿಗಿರುವ ಸಮರ್ಪಣಾ ಮನೋಭಾವ ನಿಜಕ್ಕೂ ಸ್ಫೂರ್ತಿದಾಯಕ. ಅವರ ಶಕ್ತಿ ಮತ್ತು ಸ್ಪಷ್ಟ ದೂರದೃಷ್ಟಿಯನ್ನು ನಾನು ಯಾವಾಗಲೂ ಪ್ರಶಂಸಿಸುತ್ತೇನೆ. ಭಾರತವನ್ನು ಮುನ್ನಡೆಸುವಲ್ಲಿ ಅವರ ವಿವೇಕ ಮತ್ತು ಸೌಜನ್ಯ ಶ್ಲಾಘನೀಯ,” ಎಂದು ಮೋಹನ್ ಲಾಲ್ ಹೇಳಿದ್ದಾರೆ.

ಬಿಕ್ಕಟ್ಟು ಎದುರಾದಾಗ ಮೋದಿ ಅವರು ನಿರ್ವಹಿಸುವ ರೀತಿಯೂ ದೇಶವನ್ನು ಮುನ್ನಡೆಸುವ ವಿಧಾನವೂ ಪ್ರತಿಯೊಬ್ಬರೂ ಕಲಿಯಬೇಕಾದ ವಿಷಯವಾಗಿದೆ ಎಂದು ಅವರು ಹೇಳಿದರು.
ಪ್ರಧಾನಿ ನಿವಾಸದಲ್ಲಿ ಆತಿಥ್ಯ ವಹಿಸಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಕಲಾವಿದರು ಮತ್ತು ಸೃಜನಶೀಲರಿಗೆ ಮೋದಿ ತೋರಿಸುವ ಉತ್ಸಾಹ, ಕಾಳಜಿ ಮತ್ತು ಗೌರವವನ್ನು ತಾವು ವೈಯಕ್ತಿಕವಾಗಿ ಅನುಭವಿಸಿದ್ದೇನೆ ಎಂದರು.

“ಅವರ ಹತ್ತಿರ ನಿಂತಾಗಲೇ ರಾಷ್ಟ್ರದ ಮೇಲಿನ ಅವರ ಬದ್ಧತೆ ಹಾಗೂ ಪ್ರೀತಿ ಅನುಭವವಾಗುತ್ತದೆ. ಅವರು ಕೇವಲ ರಾಜಕಾರಣಿಯಲ್ಲ, ಒಬ್ಬ ನಾಯಕ. ಜನರು ತಮ್ಮ ತಾಯಂದಿರಿಗೆ ತೋರುವ ಭಕ್ತಿಯಂತೆಯೇ ದೇಶದ ಮೇಲಿನ ಭಕ್ತಿಯಿಂದ ಅವರು ರಾಷ್ಟ್ರವನ್ನು ಮುನ್ನಡೆಸುತ್ತಿದ್ದಾರೆ,” ಎಂದು ಹೇಳಿದರು.

ಮೋದಿ ಶಾಂತ ಹಾಗೂ ಆಧ್ಯಾತ್ಮಿಕ ಸನ್ನಿಧಿಯನ್ನು ಹೊಂದಿರುವ ವ್ಯಕ್ತಿ ಎಂದು ಹೇಳಿದ ಮೋಹನ್ ಲಾಲ್, “ಅವರು ಸದಾ ಧ್ಯಾನಸ್ಥನಂತಿರುತ್ತಾರೆ. ಯೋಗಿಯಂತೆ ಅಹಂವಿಲ್ಲದೆ ಕಾರ್ಯನಿರ್ವಹಿಸುವ ನಾಯಕರು. ಯೋಗವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವಲ್ಲಿ ಅವರ ಪಾತ್ರ ಮಹತ್ತರವಾಗಿದೆ,” ಎಂದು ಶ್ಲಾಘಿಸಿದರು.

LEAVE A REPLY

Please enter your comment!
Please enter your name here