ಅಲೆಮಾರಿ ಸಮುದಾಯದ‌ ಮೀಸಲಾತಿ ಕೂಗು ದೆಹಲಿಯತ್ತ..!

0
177
Advertisement

ದೆಹಲಿ ಅ.3:

ಅಲೆಮಾರಿ ಸಮುದಾಯಗಳ ಮೀಸಲಾತಿ ಕೂಗು ಇಂದು ನಿನ್ನೆಯದಲ್ಲ, ಇತ್ತೀಚೆಗೆ ನಡೆದ ಕರ್ನಾಟಕ ಸರಕಾರ ಒಳ ಮೀಸಲಾತಿ ಹಂಚಿಕೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಅಲೆಮಾರಿ ಸಮುದಾಯದವರು ದೆಹಲಿಯ ಜಂತರ್ ಮಂತರ್ ನಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಒಳಮೀಸಲಾತಿ ಹಂಚಿಕೆಯಲ್ಲಿ ಸರಕಾರ ನಿರ್ಲಕ್ಷ್ಯ ಆರೋಪಿಸಿ ಸುಮಾರು 59 ಅಲೆಮಾರಿ ಜಾತಿಗಳು ಒಂದೇ ವೇದಿಕೆಯಲ್ಲಿ ಪ್ರತಿಭಟನೆಗೆ ಮುಂದಾಗಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿಭಟನಾಕಾರರು, ಜಂತರ್ ಮಂತರ್ ನಲ್ಲಿನ ಪ್ರತಿಭಟನೆಯ ಬಳಿಕ ಅಕ್ಬರ್ ರಸ್ತೆಯಲ್ಲಿರುವ ಹಳೆಯ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನವನ್ನು ನಡೆಸಿದರು.

ನ್ಯಾ. ನಾಗಮೋಹನ್ ದಾಸ್ ತಮ್ಮ ವರದಿಯಲ್ಲಿ ಪರಿಶಿಷ್ಟ ಸಮುದಾಯವನ್ನು ಐದು ವಿಭಾಗಗಳಾಗಿ ಪರಿಗಣಿಸಿ ಮೀಸಲಾತಿ ಹಂಚಿಕೆ ಮಾಡಿದ್ದರೂ ಕೂಡ ಸರಕಾರ ಕೇವಲ ಮೂರು ವರ್ಗಕ್ಕೆ ಮಾತ್ರ ಸೀಮಿತಗೊಳಿಸಿದೆ. ಅಲೆಮಾರಿ ಸಮುದಾಯಕ್ಕೆ ನೀಡಲಾಗಿದ್ದ ಶೇ.1 ರಷ್ಟು ಮೀಸಲಾತಿಯನ್ನು ತೆಗೆದು, ವರ್ಗ ‘ಸಿ’ಗೆ ವಿಲೀನಗೊಳಿಸಿರುವ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ಮಾತಾಡಿ, ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯ ಹಾಗೂ ರಾಹುಲ್ ಗಾಂಧಿಯ ಅನುಪಸ್ಥಿಯನ್ನು ಪ್ರತಿನಿಧಿ ನಿಯೋಗದ ಮುಂದೆ ಪ್ರಸ್ತುತ ಪಡಿಸಿ, ಸಮಸ್ಯೆಯನ್ನು ಪರಿಹರಿಸಲು ಹೈಕಮಾಂಡ್ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಮತ್ತು ರಾಹುಲ್ ಗಾಂಧಿ ವಿದೇಶ ಪ್ರವಾಸದ ನಂತರ ನಿಮ್ಮ ಭೇಟಿಗೆ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನಂತರ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಅಲೆಮಾರಿ ಮಹಾ ಒಕ್ಕೂಟವು ಕೆಲವೊಂದು ನಿರ್ಣಯಗಳನ್ನು ಪ್ರಕಟಿಸಿದವು. ಹೋರಾಟವನ್ನು ನ್ಯಾಯ ಸಿಗುವ ತನಕ ಮುಂದುವರೆಸಲಾಗುವುದು. ಕಾಂಗ್ರೆಸ್ ಹೈಕಮಾಂಡ್ ಖಚಿತ ತೀರ್ಮಾನ ಕೈಗೊಳ್ಳುವ ತನಕ ದೆಹಲಿಯನ್ನೇ ತೊರೆಯುವುದಿಲ್ಲ ಎಂದು ತೀರ್ಮಾನಕ್ಕೆ ಬಂದು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಅಲೆಮಾರಿ ಸಮುದಾಯಗಳ ಒಳಮೀಸಲಾತಿ ವಿಷಯದಲ್ಲಿ ಕರ್ನಾಟಕ ಸರಕಾರ ನಿರ್ಲಕ್ಷ್ಯವಹಿಸಿದೆ. ಪರಿಹಾರ ಸಿಗುವ ತನಕ ದೆಹಲಿಯಲ್ಲಿಯೇ ತಂಗುತ್ತೇವೆ ಎಂದು ಒಳಮೀಸಲಾತಿ ಹೋರಾಟ ಕಾರ್ಯಕರ್ತ ಸರೋವರ್ ಹೇಳಿದ್ದಾರೆ.

ಮೀಸಲಾತಿ ಪ್ರತಿಭಟನೆಗೆ ಪ್ರಪ್ರಥಮವಾಗಿ ಬೆಂಗಳೂರು ಫ್ರೀಡಂ ಪಾರ್ಕಲ್ಲಿ ನಾವು ಹೋರಾಟ ನಡೆಸಿದ್ದೇವೆ. ಅಲೆಮಾರಿ ಸಮುದಾಯದ ಶಾಸಕರಾದಂತಹ ಕೊತ್ತೂರು ಮಂಜುನಾಥ್ ಅವರು ಭರವಸೆ ಕೊಟ್ಟಿದ್ದರು. ನಮಗೆ 5% ಮೀಸಲಾತಿಯನ್ನು ಜೊತೆಯಾಗಿಸಿ ಕೊಟ್ಟಿರುವಂತದ್ದು ಸರಿಯಲ್ಲ. ಲಂಬಾಣಿ, ಬೋವಿ ದೊಡ್ಡ ಸಮಾಜ. ನಮ್ಮಲ್ಲಿ ಅಧಿಕಾರಿಗಳು , ಮುನ್ನಲೆಯಲ್ಲಿರುವವರು ಯಾರೂ ಇಲ್ಲ. ಹೀಗಾಗಿ ಅವರೊಂದಿಗೆ ಸೇರಿಸದೆ ಪ್ರತ್ಯೇಕ ಮೀಸಲಾತಿ ಕೊಡಬೇಕಿದೆ. ರಾಯಚೂರು ಗದಗ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ನಮ್ಮ ಸಮುದಾಯವಿದೆ. ಸಿ.ಎಂ. ಸಿದ್ಧರಾಮಯ್ಯನವರು ಅಲೆಮಾರಿ ಜನಾಂಗಕ್ಕೆ ನಿಗಮ ಮಾಡಿದ್ದಾರೆ ಬಹಳ ವ್ಯವಸ್ಥೆ ಮಾಡಿದ್ದಾರೆ. ನಮ್ಮ ಸಮುದಾಯಕ್ಕೆ 1% ಮೀಸಲಾತಿ ಕೊಟ್ಟರೆ ಬಹಳ ಉಪಯೋಗ ಆಗುತ್ತೆ ಮತ್ತು ಸಾಮಾಜಿಕ ನ್ಯಾಯ ಕೊಟ್ಟಂಗೆ ಆಗುತ್ತೆ” – ಅಮರೇಶ್, ಅಲೆಮಾರಿ ಸಮುದಾಯದ ಕಲಾವಿದರು, ಹಸಮಕಲ್, ರಾಯಚೂರು

ಒಳಮೀಸಲಾತಿ ಹಂಚಿಕೆಯಲ್ಲಿಅಲೆಮಾರಿ ಸುಮುದಾಯಕ್ಕೆ ಲಂಬಾಣಿ , ಬೋವಿ, ಕೊರಚ, ಕೊರಮ ಜಾತಿಯರೊಂದಿಗೆ ಸೇರಿಸಿ 5% ಮೀಸಲಾತಿ ಕೊಟ್ಟಿದ್ದೇವೆ. ಈಗೇನು ಪ್ರತ್ಯೇಕ 1% ಮೀಸಲಾತಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ 1% ಜೊತಗೆ ಉಳಿದ ನಾಲ್ಕು 4% ಮೀಸಲಾತಿ ಜಾಸ್ತಿ ಸಿಕ್ಕ ಹಾಗೆ. ಹೋರಾಟ ಮಾಡುವುದು ಅವರ ಹಕ್ಕು .ಇದರೆ ಬಗ್ಗೆ ಅವರ ಮನವೋಲಿಸಿ ತಕ್ಕುದಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇವೆ. ದಲಿತರ, ಹಿಂದುಳಿದವರ ಪರವಾಗಿ ಎಂದಿಗೂ ನಮ್ಮ ಸರಕಾರವಿರುತ್ತದೆ”
ಮುಂಡ್ರಿಗಿ ನಾಗರಾಜ್,
ಅಧ್ಯಕ್ಷರು,
ಬಾಬು ಜಗಜೀವನರಾಂ ಚರ್ಮ ಕೈಗಾರಿಕಾಭಿವೃದ್ಧಿ ನಿಗಮ, ಬೆಂಗಳೂರು

Advertisement

LEAVE A REPLY

Please enter your comment!
Please enter your name here