

ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಿರುಗುಪ್ಪ ಘಟಕದ ವತಿಯಿಂದ ಎಸ್.ಇ.ಎಸ್. ಪಾಲಿಟೆಕ್ನಿಕ್ ಕಾಲೇಜಿಯಲ್ಲಿ ದಿನಾಂಕ ೨೪-೦೨-೨೬ ನಡೆದ “ವ್ಯಕ್ತಿತ್ವ ವಿಕಸನಕ್ಕೆ ವಚನ ಸಾಹಿತ್ಯ” ವಿಷಯದ ಕುರಿತು ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಬಸವ ಬಳಗದ ಶ್ರೀಮತಿ ಸರ್ವಮಂಗಳ ಅವರು ವಚನಗಳು ಕೇವಲ ಭಕ್ತಿಪರ ಸಾಹಿತ್ಯವಲ್ಲ, ಜೀವನದ ನೈತಿಕ ಮೌಲ್ಯಗಳನ್ನು ಬೋಧಿಸುವ ಜೀವನಪಾಠಗಳಾಗಿವೆ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ವಚನಕಾರರ ಚಿಂತನೆಗಳು ಆತ್ಮಪರಿಶೀಲನೆ, ಸಮಾನತೆ, ಪರಿಶ್ರಮ ಮತ್ತು ನೈತಿಕತೆ ಎಂಬ ಮೌಲ್ಯಗಳನ್ನು ಸಾರುತ್ತವೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಮೌಲ್ಯಾಧಾರಿತ ಬದುಕನ್ನು ರೂಪಿಸಿಕೊಳ್ಳಲು ವಚನಗಳ ಸಂದೇಶಗಳು ಅತ್ಯಂತ ಅಗತ್ಯವೆಂದು ತಿಳಿಸಿದರು.

ದತ್ತಿದಾನಿಗಳಾದ ಶ್ರೀ.ನಾಗನಗೌಡ ಕೆ., ಲೆಕ್ಕ ಪರಿಶೋಧಕರು, ಇವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಇಂತಹ ಮೌಲ್ಯಯುತ ಕಾರ್ಯಕ್ರಮಗಳು ಯುವಜನರಲ್ಲಿ ಚಿಂತನಾ ಶಕ್ತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತವೆ ಎಂದು ಹೇಳಿ ಸಾಹಿತ್ಯದ ಮೂಲಕ ಸಮಾಜದಲ್ಲಿ ನೈತಿಕತೆ ಮತ್ತು ಸಂಸ್ಕಾರ ಬೆಳೆಸುವ ಕಾರ್ಯಕ್ಕೆ ತಾವು ಸದಾ ಬೆಂಬಲ ನೀಡಲು ಸಿದ್ಧ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಸಿರುಗುಪ್ಪ ಘಟಕದ ಅಧ್ಯಕ್ಷರಾದ ಡಾ.ಮಧುಸೂದನ ಕಾರಿಗನೂರು ವಚನ ಸಾಹಿತ್ಯವು ವ್ಯಕ್ತಿತ್ವ ನಿರ್ಮಾಣಕ್ಕೆ ಆಧಾರವಾಗಿದ್ದು, ಸತ್ಯ, ಧರ್ಮ, ಶ್ರಮ ಮತ್ತು ಸಮಾನತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ವಚನಗಳ ಚಿಂತನೆಗಳನ್ನು ತಮ್ಮ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ನಾಗರಿಕರಾಗಿ ರೂಪುಗೊಳ್ಳಬಹುದು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ದಾದಿ ಸತೀಶ್‌ಬಾಬು ಅವರು ತಾಂತ್ರಿಕ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವೂ ಅಗತ್ಯವೆಂದು ಹೇಳುತ್ತಾ ಇಂತಹ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಮತ್ತು ನೈತಿಕ ಅರಿವು ಮೂಡಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಮುಂದೆಯೂ ಇಂತಹ ಚಿಂತನಾ ಕಾರ್ಯಕ್ರಮಗಳನ್ನು ಆಯೋಜಿಸಲು ಕಾಲೇಜು ಸಿದ್ಧವಿದೆ ಎಂದು ತಿಳಿಸಿದರು.
ಶಿಕ್ಷಕರಾದ ಶ್ರೀ. ಶೇಖರಪ್ಪ ನಿರೂಪಿಸಿ ವಂದಿಸಿದ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು,ಶ್ರೀ.ಶಿವಕುಮಾರ್ ಬಳಿಗಾರ್, ಶ್ರೀ.ಎಂ.ವೆಂಕಟೇಶ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.





