
ವಾಷಿಂಗ್ಟನ್/ಟೆಹ್ರಾನ್, ಏಪ್ರಿಲ್ 8: ಇರಾನ್ ಮೇಲಿನ ಭಾರೀ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವು ಮುಗಿಯಲು ಕೇವಲ ಎರಡು ಗಂಟೆಗಳಿರುವಾಗ ಮಹತ್ವದ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಟ್ರಂಪ್ ತಮ್ಮ ದಾಳಿ ನಿರ್ಧಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಎರಡು ವಾರಗಳ ಕದನ ವಿರಾಮಕ್ಕೆ ಸಮ್ಮತಿಸಿದ್ದಾರೆ.
ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಸಮ್ಮತಿ
ಕಳೆದ ಐದು ವಾರಗಳಿಂದ ನಡೆಯುತ್ತಿದ್ದ ಯುದ್ಧದ ಪರಿಣಾಮವಾಗಿ ಜಗತ್ತಿನ ತೈಲ ಪೂರೈಕೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಬಂದ್ ಆಗಿತ್ತು. ಇದೀಗ ಇರಾನ್ ಈ ಜಲಸಂಧಿಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಂಡಿದೆ. ಈ ಹಿಂದೆ ಇರಾನ್‌ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಇದರಿಂದ ಯುದ್ಧಾಪರಾಧದ ಆತಂಕ ವ್ಯಕ್ತವಾಗಿದ್ದು, ವಿಶ್ವಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ವಲಯದಲ್ಲಿ ಚಿಂತೆ ಮೂಡಿತ್ತು.
ಇದೀಗ ಇರಾನ್ ನೀಡಿರುವ 10 ಅಂಶಗಳ ಪ್ರಸ್ತಾವನೆಯ ಆಧಾರದ ಮೇಲೆ ಶಾಂತಿ ಮಾತುಕತೆ ಆರಂಭಿಸಲು ಅಮೆರಿಕ ಮುಂದಾಗಿದೆ. ಇಸ್ರೇಲ್ ಕೂಡ ಈ ಕದನ ವಿರಾಮಕ್ಕೆ ಬೆಂಬಲ ಸೂಚಿಸಿರುವುದಾಗಿ ವರದಿಯಾಗಿದೆ.
ಇರಾನ್‌ನ 10 ಅಂಶಗಳ ಪ್ರಸ್ತಾವನೆ
ಇರಾನ್ ಮುಂದಿಟ್ಟಿರುವ ಪ್ರಮುಖ ಅಂಶಗಳು ಇಂತಿವೆ:
- ಆಕ್ರಮಣಶೀಲತೆ ಕೈಗೊಳ್ಳದ ಬದ್ಧತೆ
- ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಮುಂದುವರಿಕೆ
- ಯುರೇನಿಯಂ ಪುಷ್ಟೀಕರಣಕ್ಕೆ ಮಾನ್ಯತೆ
- ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ನಿರ್ಬಂಧಗಳ ತೆರವು
- ಭದ್ರತಾ ಮಂಡಳಿ ಹಾಗೂ ಐ.ಎ.ಇ.ಎ ನಿರ್ಣಯಗಳ ರದ್ದು
- ಜಲಸಂಧಿ ಆದಾಯವನ್ನು ಮೂಲಸೌಕರ್ಯ ಪುನರ್‌ನಿರ್ಮಾಣಕ್ಕೆ ಬಳಕೆ
- ಇರಾನ್‌ಗೆ ಪರಿಹಾರ ಪಾವತಿಗಳು
- ಅಮೆರಿಕದ ಸೇನಾ ಪಡೆ ಹಿಂತೆಗೆದುಕೊಳ್ಳುವುದು
- ಎಲ್ಲಾ ಯುದ್ಧ ಚಟುವಟಿಕೆಗಳ ಸ್ಥಗಿತ
- ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಿಲ್ಲಿಸುವುದು
ಟ್ರಂಪ್ ಅಧಿಕೃತ ಹೇಳಿಕೆ
ಟ್ರಂಪ್ ತಮ್ಮ ಹೇಳಿಕೆಯಲ್ಲಿ, ಪಾಕಿಸ್ತಾನದ ನಾಯಕತ್ವದ ಮನವಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. “ಇಂದು ರಾತ್ರಿ ಇರಾನ್ ಮೇಲೆ ನಡೆಸಬೇಕಿದ್ದ ವಿನಾಶಕಾರಿ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ತೆರೆಯಲು ಒಪ್ಪಿಕೊಂಡಿರುವುದರಿಂದ, ಎರಡು ವಾರಗಳ ಕಾಲ ಬಾಂಬ್ ದಾಳಿ ಅಮಾನತುಗೊಳಿಸಲು ನಾವು ಸಮ್ಮತಿಸಿದ್ದೇವೆ” ಎಂದು ಹೇಳಿದ್ದಾರೆ.
ಇದು ಉಭಯಪಕ್ಷೀಯ ಕದನ ವಿರಾಮವಾಗಿದ್ದು, ದೀರ್ಘಕಾಲೀನ ಶಾಂತಿ ಒಪ್ಪಂದದ ದಿಕ್ಕಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಇದು ಮಹತ್ವದ ಅವಕಾಶವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.





