
ನವದೆಹಲಿ, ಜ.2: ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಆಗಿ ಡಚ್ ಕೋಚ್ ಸ್ಜೋರ್ಡ್ ಮಾರಿಜ್ನೆ ಅವರನ್ನು ಮತ್ತೆ ನೇಮಕ ಮಾಡಲಾಗಿದೆ. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ನಾಲ್ಕನೇ ಸ್ಥಾನ ಪಡೆದಾಗ ಮಾರಿಜ್ನೆ ಮುಖ್ಯ ಕೋಚ್ ಆಗಿದ್ದರು.
2021ರ ಆಗಸ್ಟ್‌ನಲ್ಲಿ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ 2024ರ ಏಪ್ರಿಲ್‌ನಲ್ಲಿ ಹರೇಂದ್ರ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಆದರೆ ಅವರ ಅವಧಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. 2024–25ರ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ 16 ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳನ್ನಷ್ಟೇ ತಂಡ ಸಾಧಿಸಿತು. ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಹರೇಂದ್ರ ಅವರು ಡಿಸೆಂಬರ್‌ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಇದೀಗ ಹಾಕಿ ಇಂಡಿಯಾ ಮತ್ತೆ ಸ್ಜೋರ್ಡ್ ಮಾರಿಜ್ನೆ ಅವರಿಗೆ ಜವಾಬ್ದಾರಿ ನೀಡಿದೆ. ಅವರು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ವರೆಗೆ ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಜನವರಿ 19ರಿಂದ ಆರಂಭವಾಗುವ ಪೂರ್ವಸಿದ್ಧತಾ ಶಿಬಿರದ ಜವಾಬ್ದಾರಿಯನ್ನೂ ಅವರು ವಹಿಸಿಕೊಳ್ಳಲಿದ್ದಾರೆ.
ಕೋಚಿಂಗ್ ತಂಡದಲ್ಲೂ ಬದಲಾವಣೆ ಮಾಡಲಾಗಿದೆ. ಮಾಜಿ ಅರ್ಜೆಂಟೀನಾ ಆಟಗಾರ ಮಟಿಯಾಸ್ ವಿಲಾ ವಿಶ್ಲೇಷಣಾತ್ಮಕ ತರಬೇತುದಾರರಾಗಿ ಸೇರಿಕೊಳ್ಳಲಿದ್ದಾರೆ. ವೇಯ್ನ್ ಲೊಂಬಾರ್ಡ್ ಅವರನ್ನು ಆಟಗಾರರ ದೈಹಿಕ ಸಾಮರ್ಥ್ಯ ಮತ್ತು ಫಿಟ್ನೆಸ್ ನೋಡಿಕೊಳ್ಳುವ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
ಮರುನಿಯುಕ್ತಿ ಕುರಿತು ಮಾತನಾಡಿದ ಮಾರಿಜ್ನೆ, “ಮತ್ತೆ ಭಾರತ ತಂಡದೊಂದಿಗೆ ಕೆಲಸ ಮಾಡಲು ಸಂತೋಷವಾಗಿದೆ. ಆಟಗಾರರು ವಿಶ್ವ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವಂತೆ ಸಹಾಯ ಮಾಡುವ ಗುರಿ ಹೊಂದಿದ್ದೇನೆ,” ಎಂದು ಹೇಳಿದ್ದಾರೆ.
ಈ ನಡುವೆ, ಜೂನಿಯರ್ ಮಹಿಳಾ ಹಾಕಿ ತಂಡಕ್ಕೆ ಹೊಸ ಕೋಚ್ ನೇಮಕ ಮಾಡುವ ಪ್ರಕ್ರಿಯೆಯನ್ನೂ ‘ಹಾಕಿ ಇಂಡಿಯಾ’ ಆರಂಭಿಸಿದೆ.





