
ಚೆನ್ನೈ, ಮಾ.14: ಎಐಎಡಿಎಂಕೆಯಿಂದ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರು ಇತ್ತೀಚೆಗೆ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದ ಹಿನ್ನೆಲೆಯಲ್ಲಿ, ಶುಕ್ರವಾರ ತಮ್ಮ ನೂತನ ಪಕ್ಷದ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಪಕ್ಷಕ್ಕೆ ‘ಅಖಿಲ ಭಾರತ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ’ ಎಂದು ಹೆಸರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 24ರಂದು ದಿವಂಗತ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರ 74ನೇ ಜನ್ಮ ದಿನಾಚರಣೆಯ ಅಂಗವಾಗಿ, ರಾಮನಾಥಪುರಂ ಜಿಲ್ಲೆಯ ಕಮುತಿ ಪಟ್ಟಣದಲ್ಲಿ ಶಶಿಕಲಾ ಹೊಸ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದರು.
ಶುಕ್ರವಾರ ವರದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹೊಸ ಪಕ್ಷದ ಚಿಹ್ನೆ ‘ತೆಂಗಿನ ತೋಟ’ ಆಗಿರಲಿದೆ ಎಂದು ತಿಳಿಸಿದರು. ಇದು ಶ್ರಮಿಕ ವರ್ಗದ ಸಂಕೇತವನ್ನು ಪ್ರತಿನಿಧಿಸುತ್ತದೆ ಎಂದು ಶಶಿಕಲಾ ಹೇಳಿದ್ದಾರೆ.
ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮ ಪಕ್ಷವು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಲಿದೆ ಎಂದು ಸ್ಪಷ್ಟಪಡಿಸಿದರು.
“ಕೆಲವರು ಏಕಾಂಗಿಯಾಗಿ ಸ್ಪರ್ಧಿಸಲು ಬಯಸುತ್ತಾರೆ ಮತ್ತು ಮೈತ್ರಿ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ನಾವು ಹಾಗಲ್ಲ. ತಮಿಳುನಾಡಿನ ಜನರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಎದುರಾಗುತ್ತೇವೆ” ಎಂದು ಶಶಿಕಲಾ ತಿಳಿಸಿದ್ದಾರೆ.





