
ಬೆಂಗಳೂರು, ಮಾ.25: ಕರ್ನಾಟಕದ ಹೆಮ್ಮೆಯ ‘ನಂದಿನಿ’ ಉತ್ಪನ್ನಗಳ ಪ್ರಚಾರಕ್ಕಾಗಿ ಕರ್ನಾಟಕ ಹಾಲು ಮಹಾಮಂಡಳಿ (KMF) ಐಪಿಎಲ್ನ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಡಿಯಲ್ಲಿ ತಂಡದ ತಾರಾ ಆಟಗಾರರಾದ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಹಾಗೂ ದೇವದತ್ ಪಡಿಕಲ್ ಅವರ ಭಾವಚಿತ್ರಗಳನ್ನು ನಂದಿನಿ ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಬಳಸಲಾಗುತ್ತದೆ.

ಒಂದು ವರ್ಷದ ಅವಧಿಗೆ ಮಾಡಿಕೊಳ್ಳಲಾದ ಈ ಪ್ರಾಯೋಜಕತ್ವ ಒಪ್ಪಂದಕ್ಕೆ ಕೆಎಂಎಫ್ ಬರೋಬ್ಬರಿ ₹4.80 ಕೋಟಿ ವೆಚ್ಚ ಮಾಡಿದೆ. ಈ ಮೂಲಕ ‘ನಂದಿನಿ’ ಬ್ರ್ಯಾಂಡ್ನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುವ ಗುರಿಯನ್ನು ಕೆಎಂಎಫ್ ಹೊಂದಿದೆ.
ಆರ್ಸಿಬಿ ತಂಡಕ್ಕೆ ದೇಶದಾದ್ಯಂತ ಅಪಾರ ಅಭಿಮಾನಿ ಬಳಗವಿರುವ ಹಿನ್ನೆಲೆಯಲ್ಲಿ, ಈ ಸಹಭಾಗಿತ್ವದಿಂದ ಮಾರ್ಕೆಟ್ ವಿಸ್ತರಣೆ ಸಾಧ್ಯವಾಗಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಸಂತೋಷ ವ್ಯಕ್ತಪಡಿಸಿದ್ದಾರೆ.
“2024ರಿಂದಲೇ ಆರ್ಸಿಬಿ ಜೊತೆ ಈ ಪ್ರಯತ್ನ ನಡೆಯುತ್ತಿತ್ತು. ಕ್ರೀಡಾ ಪ್ರಾಯೋಜಕತ್ವದ ಮೂಲಕ ಯುವಜನರನ್ನು ಸೆಳೆಯುವ ಉದ್ದೇಶವಿದೆ. ಈ ಒಪ್ಪಂದದಿಂದ ‘ನಂದಿನಿ’ ಉತ್ಪನ್ನಗಳ ಪ್ರಚಾರ ಮತ್ತಷ್ಟು ವೇಗ ಪಡೆಯಲಿದೆ,” ಎಂದು ಅವರು ತಿಳಿಸಿದ್ದಾರೆ.
ಮಾ. 28ರಂದು ಆರಂಭವಾಗಲಿರುವ ಆರ್ಸಿಬಿ ಮೊದಲ ಪಂದ್ಯದಿಂದ ಈ ಒಪ್ಪಂದ ಜಾರಿಗೆ ಬರಲಿದ್ದು, ಒಂದು ವರ್ಷ ಅವಧಿಗೆ ಮುಂದುವರಿಯಲಿದೆ





