
ಮರ್ಯಾದೆ ಹತ್ಯೆ ಸೇರಿದಂತೆ ಜಾತಿ ಆಧಾರಿತ ಅಪರಾಧಗಳಿಗೆ ಕಟ್ಟುನಿಟ್ಟಿನ ನಿಷೇಧ; ತೆರಿಗೆ ತಿದ್ದುಪಡಿ ವಿಧೇಯಕವೂ ಮಂಡನೆ
ಬೆಂಗಳೂರು, ಮಾ.19: 2026ನೇ ಸಾಲಿನ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿರುವ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (‘ಇವ ನಮ್ಮವ ಇವ ನಮ್ಮವ’) ವಿಧೇಯಕವನ್ನು ಮುಖ್ಯಮಂತ್ರಿ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ–ಜೈವಿಕ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದರು.
ರಾಜ್ಯದಲ್ಲಿ ಜಾತಿ ಆಧಾರಿತ ತಾರತಮ್ಯ ಮುಂದುವರಿದಿದ್ದು, ಅಂತರ್ಜಾತಿ ವಿವಾಹ ಮಾಡಿಕೊಳ್ಳುವ ಯುವಕರ ಮೇಲೆ ಮರ್ಯಾದೆ ಹತ್ಯೆ ಸೇರಿದಂತೆ ಕ್ರೂರ ಹಿಂಸಾಚಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ವಿಧೇಯಕ ಅವಶ್ಯಕವಾಗಿದೆ ಎಂದು ಸಚಿವರು ವಿವರಿಸಿದರು.
ಈ ವಿಧೇಯಕವು ವ್ಯಕ್ತಿಯ ಘನತೆ, ರಾಷ್ಟ್ರದ ಏಕತೆ ಹಾಗೂ ಭ್ರಾತೃತ್ವದ ತತ್ವವನ್ನು ಬಲಪಡಿಸುವುದರ ಜೊತೆಗೆ, ಜಾತಿ ಆಧಾರಿತ ತಾರತಮ್ಯ ನಿರ್ಮೂಲನೆ ಮತ್ತು ಅಂತರ್ಜಾತಿ ವಿವಾಹಗಳಿಗೆ ರಕ್ಷಣೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಜೊತೆಗೆ, ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಸಂರಕ್ಷಿಸಿ, ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯುವತ್ತ ಗಮನ ಹರಿಸಲಾಗಿದೆ.
ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ಮತ್ತು ರಕ್ಷಿಸಲು ‘ಇವ ನಮ್ಮವ ಇವ ನಮ್ಮವ ವೇದಿಕೆ’ ರಚನೆಗೂ ವಿಧೇಯಕದಲ್ಲಿ ಪ್ರಾವಧಾನ್ಯ ನೀಡಲಾಗಿದೆ. ವಿಧೇಯಕದ ಪ್ರಸ್ತಾವವನ್ನು ಅಂಗೀಕರಿಸುವಂತೆ ಸಚಿವರು ಸದನವನ್ನು ಕೋರಿದರು.
ಇದೇ ವೇಳೆ, 2026ನೇ ಸಾಲಿನ ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕವನ್ನೂ ಸಚಿವರು ಮಂಡಿಸಿದರು. ಈ ತಿದ್ದುಪಡಿ ತೆರಿಗೆ ನಿರ್ವಹಣೆಯನ್ನು ಸರಳಗೊಳಿಸುವುದು, ಸ್ವಯಂ ಅನುಸರಣೆಯನ್ನು ಉತ್ತೇಜಿಸುವುದು ಹಾಗೂ ಇಲಾಖೆಯ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸುವ ಉದ್ದೇಶ ಹೊಂದಿದೆ.
ವಿಧೇಯಕದಡಿ ನಿಷೇಧಿಸಲ್ಪಡುವ ಕೃತ್ಯಗಳು:
- ಜಾತಿ, ಸಂಸ್ಕೃತಿ, ಸಂಪ್ರದಾಯ ಅಥವಾ ಗೌರವದ ಹೆಸರಿನಲ್ಲಿ ಯಾವುದೇ ಹಿಂಸಾತ್ಮಕ ಕೃತ್ಯ
- ಮರ್ಯಾದೆ ಹತ್ಯೆ ಹಾಗೂ ಅದರ ಯತ್ನ
- ಅಂತರ್ಜಾತಿ ವಿವಾಹಿತರು ಅಥವಾ ಪ್ರೇಮಿಗಳ ಮೇಲೆ ದೈಹಿಕ ಹಲ್ಲೆ, ಕೊಲೆ
- ಜೋಡಿಗಳನ್ನು ಬೇರ್ಪಡಿಸಲು ಒತ್ತಾಯಿಸುವುದು ಅಥವಾ ಕಿರುಕುಳ ನೀಡುವುದು
- ಜೋಡಿಗಳು ಅಥವಾ ಸಂಬಂಧಿಕರ ಅಪಹರಣ
- ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ ಹೇರಿಕೆ
- ಬಲವಂತವಾಗಿ ಮನೆ, ಗ್ರಾಮ ಅಥವಾ ಪ್ರದೇಶದಿಂದ ತೆರವುಗೊಳಿಸುವುದು
- ಜೀವಂತ ಜೋಡಿಗಳಿಗೆ ಅಂತ್ಯಕ್ರಿಯೆ ಮಾಡುವಂತಹ ಅವಮಾನಕಾರಿ ಕೃತ್ಯಗಳು
- ವಿವಾಹಿತ ಜೋಡಿಯನ್ನು ಅಣ್ಣ–ತಂಗಿ ಎಂದು ಘೋಷಿಸಲು ಒತ್ತಾಯಿಸುವುದು
- ಆಸ್ತಿ ಹಕ್ಕುಗಳಲ್ಲಿ ಅತಿಕ್ರಮಣ
- ಜೋಡಿಯನ್ನು ಬಂಧಿಸುವುದು ಅಥವಾ ಉದ್ಯೋಗ ಕಳೆದುಕೊಳ್ಳುವಂತೆ ಮಾಡುವುದು
- ದ್ವೇಷ ಹರಡುವುದು ಅಥವಾ ಮಾನಹಾನಿ ಮಾಡುವುದು
ಈ ವಿಧೇಯಕವು ಜಾತಿ ಆಧಾರಿತ ಅಪರಾಧಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ತರಲು ಮತ್ತು ಅಂತರ್ಜಾತಿ ವಿವಾಹಗಳಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.




