
ಚೆನ್ನೈ, ಮಾ.23: ಎಐಎಡಿಎಂಕೆ ಮತ್ತು ಬಿಜೆಪಿ ಜೊತೆ ಮೈತ್ರಿ ಸಾಧ್ಯತೆಗಳ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಹಾಗೂ ನಟ ದಳಪತಿ ವಿಜಯ್, ತಮ್ಮ ಪಕ್ಷವು ಸ್ವತಂತ್ರವಾಗಿ ಚುನಾವಣೆಗೆ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮಾಮಲ್ಲಪುರಂನ ಪಂಚತಾರಾ ಹೋಟೆಲ್ನಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದ ವಿಜಯ್, “ನಮ್ಮ ಜಾತ್ಯತೀತ ಅಸ್ಮಿತೆಯೊಂದಿಗೆ ಯಾವುದೇ ರೀತಿಯ ರಾಜೀ ಇಲ್ಲ. ನಮ್ಮ ರಾಜಕೀಯ ಸಿದ್ಧಾಂತವನ್ನು ಒಪ್ಪಿಕೊಳ್ಳುವವರೊಂದಿಗೆ ಮಾತ್ರವೇ ಹೊಂದಾಣಿಕೆ ಇರುತ್ತದೆ” ಎಂದು ತಿಳಿಸಿದ್ದಾರೆ.
ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ವಿಜಯ್ ಅವರ ಪಕ್ಷದೊಂದಿಗೆ ಮೈತ್ರಿ ಮಾಡಲು ಪ್ರಯತ್ನಿಸುತ್ತಿದೆ ಎಂಬ ವದಂತಿಗಳು ಇತ್ತೀಚೆಗೆ ಹರಿದಾಡುತ್ತಿದ್ದವು. ಆದರೆ ಈ ಮಾತುಕತೆಗಳನ್ನೆಲ್ಲ ವಿಜಯ್ ತಳ್ಳಿಹಾಕಿದ್ದಾರೆ.
“ಪಕ್ಷವನ್ನು ಆರಂಭಿಸಿದ ಆರಂಭಿಕ ದಿನಗಳಲ್ಲಿ ನಮ್ಮನ್ನು ವಿವಿಧ ರಾಜಕೀಯ ತಂಡಗಳೊಂದಿಗೆ ಸಂಪರ್ಕಿಸುವ ಪ್ರಯತ್ನ ನಡೆಯಿತು. ಆದರೆ ಜನರಿಂದ ಸಿಕ್ಕ ಬೆಂಬಲವನ್ನು ಕಂಡ ನಂತರ, ನಮ್ಮೊಂದಿಗೆ ಮೈತ್ರಿ ಸಾಧ್ಯತೆಗಳ ಬಗ್ಗೆ ಅನಾವಶ್ಯಕ ಸುದ್ದಿಗಳನ್ನು ಹರಡಲಾಗುತ್ತಿದೆ” ಎಂದು ಅವರು ವ್ಯಂಗ್ಯವಾಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದ್ದು, ಸಿದ್ಧಾಂತಾಧಾರಿತ ರಾಜಕೀಯವೇ ತಮ್ಮ ಆದ್ಯತೆ ಎಂಬುದನ್ನು ವಿಜಯ್ ಪುನರುಚ್ಚರಿಸಿದರು.





