ಎಐ ತಂತ್ರಜ್ಞಾನದಿಂದ ಅನುವಾದಗೊಂಡ ಮೊದಲ ಪುಸ್ತಕ ‘ನನ್ನ ಹೆಸರು ಗೌಹರ್ ಜಾನ್’ ಮಾ.15ಕ್ಕೆ ಬಿಡುಗಡೆ

0
11
Advertisement

ಬೆಂಗಳೂರು, ಮಾ.14: ವಿವಿಧ ಭಾಷೆಗಳಲ್ಲಿರುವ ಪುಸ್ತಕಗಳು ಓದುಗರಿಗೆ ಅವರದೇ ಭಾಷೆಯಲ್ಲಿ ಲಭ್ಯವಾದಾಗ ಹೆಚ್ಚು ತೃಪ್ತಿ ನೀಡುತ್ತವೆ. ಜೊತೆಗೆ ಅನೇಕ ಭಾಷೆಗಳ ಅರಿವಿಲ್ಲದ ಓದುಗರಿಗೂ ವಿಷಯವನ್ನು ಸುಲಭವಾಗಿ ಮುಟ್ಟಿಸಲು ಅನುವಾದ ಪ್ರಮುಖ ಪಾತ್ರವಹಿಸುತ್ತದೆ. ಈ ಕಾರಣದಿಂದ ಅನೇಕ ಕೃತಿಗಳು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡು ಓದುಗರ ಮೆಚ್ಚುಗೆ ಪಡೆದಿವೆ.

ಆದರೆ ಪುಸ್ತಕ ಅನುವಾದಿಸುವುದು ಸುಲಭದ ಕೆಲಸವಲ್ಲ. ಮೂಲ ಲೇಖಕರು ಹೇಳಿರುವ ಅರ್ಥವನ್ನು ಅನರ್ಥಗೊಳಿಸದೆ ಮತ್ತೊಂದು ಭಾಷೆಗೆ ಸರಿಯಾಗಿ ವರ್ಗಾಯಿಸುವುದು ಅನುವಾದಕರಿಗೆ ಸವಾಲಿನ ಕೆಲಸವಾಗಿದ್ದು, ಸಾಮಾನ್ಯವಾಗಿ ಒಂದು ಪುಸ್ತಕದ ಅನುವಾದಕ್ಕೆ ಮೂರುರಿಂದ ನಾಲ್ಕು ತಿಂಗಳುಗಳವರೆಗೆ ಸಮಯ ಬೇಕಾಗುತ್ತದೆ.

ಇದೀಗ ಜಗತ್ತಿನ ಅನೇಕ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಈ ಕ್ಷೇತ್ರದಲ್ಲಿಯೂ ಹೊಸ ಪ್ರಯೋಗಕ್ಕೆ ಕಾರಣವಾಗಿದೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ಎಐ ಸಹಾಯದಿಂದ ಅನುವಾದಿಸಲಾದ ‘My Name is Gauhar Jaan’ ಪುಸ್ತಕದ ಕನ್ನಡ ಆವೃತ್ತಿಯಾದ ‘ನನ್ನ ಹೆಸರು ಗೌಹರ್ ಜಾನ್’ ಭಾನುವಾರ (ಮಾ.15) ಬಿಡುಗಡೆಯಾಗಲಿದೆ. ಈ ಮೂಲ ಕೃತಿಯನ್ನು ಲೇಖಕ ವಿಕ್ರಮ್ ಸಂಪತ್ ರಚಿಸಿದ್ದು, ಭಾರತದ ಮೊದಲ ಸೆಲೆಬ್ರಿಟಿ ಗಾಯಕಿ ಗೌಹರ್ ಜಾನ್ ಅವರ ಜೀವನ ಕಥೆಯನ್ನು ಒಳಗೊಂಡಿದೆ.

ಈ ಪುಸ್ತಕದ ಕನ್ನಡ ಅನುವಾದ ಕಾರ್ಯಕ್ಕಾಗಿ ಬೆಂಗಳೂರು ಮೂಲದ ‘ನಾವ್ AI’ ಕಂಪನಿಯು ಅಭಿವೃದ್ಧಿಪಡಿಸಿರುವ ವಿಶೇಷ ಅನುವಾದ ಸಾಧನವನ್ನು ಬಳಸಲಾಗಿದೆ. ಸಾಮಾನ್ಯವಾಗಿ ತಿಂಗಳುಗಳ ಕಾಲ ಹಿಡಿಯುವ ಅನುವಾದ ಪ್ರಕ್ರಿಯೆಯಲ್ಲಿ, ಎಐ ನೆರವಿನಿಂದ ಈ ಪುಸ್ತಕದ ಮೊದಲ ಕರಡು ಕೇವಲ 30 ನಿಮಿಷಗಳಲ್ಲಿ ಸಿದ್ಧವಾಗಿದೆ. ನಂತರ ಅದರ ಪರಿಶೀಲನೆ ಹಾಗೂ ತಿದ್ದುಪಡಿ ಕಾರ್ಯಗಳಿಗೆ ಸುಮಾರು ಒಂದು ತಿಂಗಳ ಕಾಲ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಆದಾಗ್ಯೂ ಎಐ ಅನುವಾದದಲ್ಲಿ ಕೆಲವು ಸವಾಲುಗಳೂ ಎದುರಾಗಿದೆ. ಸಂದರ್ಭ, ಶೈಲಿ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದಿವೆ. ಕನ್ನಡದಲ್ಲಿ ಒಂದು ಪದಕ್ಕೆ ಸಂದರ್ಭದ ಮೇಲೆ ಅವಲಂಬಿಸಿ ಹಲವು ಅರ್ಥಗಳಿರುವುದರಿಂದ ಕೆಲವೊಮ್ಮೆ ಎಐ ಆಯ್ಕೆ ಮಾಡಿದ ಅರ್ಥವು ಪರಿಸ್ಥಿತಿಗೆ ಸರಿಹೊಂದದ ಸಂದರ್ಭಗಳೂ ಕಂಡುಬಂದಿವೆ.

ಪುಸ್ತಕವು ಸಂಗೀತ ಸಂಬಂಧಿತ ವಿಷಯಗಳನ್ನು ಒಳಗೊಂಡಿರುವುದರಿಂದ ರಾಗಗಳ ಉಲ್ಲೇಖಗಳು, ಅವುಗಳ ಹೆಸರುಗಳು ಹಾಗೂ ಅಕ್ಷರ ವಿನ್ಯಾಸಗಳನ್ನು ಮರುಪರಿಶೀಲಿಸಿ ತಿದ್ದುಪಡಿ ಮಾಡಲಾಗಿದೆ. ಒಟ್ಟಾರೆಯಾಗಿ ಕೃತಕ ಬುದ್ಧಿಮತ್ತೆ ಮಾನವ ಅನುವಾದಕರನ್ನು ಬದಲಿಸುವುದಕ್ಕಿಂತ ಅವರಿಗೆ ಸಹಾಯಕ ಸಾಧನವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

LEAVE A REPLY

Please enter your comment!
Please enter your name here