
ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಮೂರನೇ ಭಾಷೆಗೆ ಅಂಕ ಪದ್ಧತಿಯನ್ನು ರದ್ದುಪಡಿಸಿ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ 625 ಅಂಕಗಳಿಗೆ ನಡೆಯುತ್ತಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಈಗ 525 ಅಂಕಗಳಿಗೆ ಇಳಿಸಲಾಗಿದೆ. ಹಿಂದಿ ಸೇರಿ ತೃತೀಯ ಭಾಷೆಗಳ 100 ಅಂಕಗಳಿಗೆ “ಕೊಕ್” ನೀಡಲಾಗಿದ್ದು, ವಿದ್ಯಾರ್ಥಿಗಳು ಹಿಂದಿನಂತೆ ಪರೀಕ್ಷೆ ಬರೆಯಬೇಕಾದರೂ ಅಂಕಪಟ್ಟಿಯಲ್ಲಿ ಅಂಕಗಳ ಬದಲು ಗ್ರೇಡ್ (A, B, C, D) ಮಾತ್ರ ನಮೂದಿಸಲಾಗುತ್ತದೆ ಎಂದು ಹೇಳಿದರು.
ಈ ಹೊಸ ನಿಯಮವು 2026ರಿಂದ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದಲೇ ಅನ್ವಯವಾಗಲಿದೆ. “ಈ ಹಿಂದೆ ವಿದ್ಯಾರ್ಥಿಗಳು 625 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದರು. ಆದರೆ ಇನ್ನು ಮುಂದೆ 525 ಅಂಕಗಳಿಗೆ ಪಡೆದ ಅಂಕಗಳಷ್ಟೇ ಅಂತಿಮ ಫಲಿತಾಂಶದಲ್ಲಿ ಪರಿಗಣಿಸಲಾಗುತ್ತದೆ. ಮೂರನೇ ಭಾಷೆಯ 100 ಅಂಕಗಳು ಒಟ್ಟು ಫಲಿತಾಂಶಕ್ಕೆ ಸೇರಿಸಲಾಗುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ವಿಧಾನಸಭಾ ಅಧಿವೇಶನದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಅಂತಿಮಗೊಳಿಸಲಾಗಿದೆ. ರಾಜ್ಯದಲ್ಲಿ ಎರಡು ಭಾಷಾ ನೀತಿ ಕುರಿತು ಮುಖ್ಯಮಂತ್ರಿ ಹಿಂದೆ ಹಲವು ವೇದಿಕೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನೂ ಸಚಿವರು ಉಲ್ಲೇಖಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು, ಮೂರನೇ ಭಾಷೆಗೆ ಪಾಸ್ ಅಥವಾ ಫೇಲ್ ವ್ಯವಸ್ಥೆ ಇರದೆ ಕೇವಲ ಗ್ರೇಡಿಂಗ್ ಮಾತ್ರ ಇರಲಿದೆ. ಆದರೂ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು, ಸಂಸ್ಕೃತ, ಮರಾಠಿ, ತುಳು ಸೇರಿದಂತೆ 13–14 ಭಾಷೆಗಳು ಮೂರನೇ ಭಾಷೆಗಳಾಗಿ ಬೋಧನೆಯಲ್ಲಿವೆ. “ಹಿಂದಿ ಹೇರಿಕೆ ಕುರಿತು ಕನ್ನಡ ಸಂಘಟನೆಗಳು ಮತ್ತು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದರು. ಜೊತೆಗೆ ಕನ್ನಡಿಗ ವಿದ್ಯಾರ್ಥಿಗಳಿಗೆ ಹಿಂದಿ ಓದು-ಬರಹದಲ್ಲಿ ಕಷ್ಟವಾಗುತ್ತಿದೆ ಎಂಬ ಅಂಶವೂ ಗಮನಕ್ಕೆ ಬಂದಿದೆ. ಈ ನಿರ್ಧಾರವು ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ,” ಎಂದು ಹೇಳಿದರು.
ಇದೇ ವೇಳೆ, ಮೂರನೇ ಭಾಷೆಯನ್ನು ಸಂಪೂರ್ಣವಾಗಿ ತೆಗೆದುಹಾಕಿದರೆ ಆ ಭಾಷೆ ಬೋಧಿಸುವ ಶಿಕ್ಷಕರಿಗೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂಬುದನ್ನೂ ಅವರು ತಿಳಿಸಿದರು.
ಕಳೆದ ವರ್ಷ ಮೂರನೇ ಭಾಷಾ ಪರೀಕ್ಷೆಯಲ್ಲಿ 1.64 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಅವರಲ್ಲಿ 1.48 ಲಕ್ಷ ಮಂದಿ ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದ ಸಚಿವರು, “ಇದು ವಿದ್ಯಾರ್ಥಿಗಳ ಮೇಲೆ ಇರುವ ಒತ್ತಡವನ್ನು ತೋರಿಸುತ್ತದೆ. ಇತರ ವಿಷಯಗಳಲ್ಲಿಯೂ ಅವರು ಕಷ್ಟಪಟ್ಟಿರುವ ಸಾಧ್ಯತೆ ಇದೆ,” ಎಂದು ಹೇಳಿದರು.
ಎರಡು ಭಾಷಾ ನೀತಿ ಜಾರಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿ, ಆ ವಿಷಯ ಸರ್ಕಾರ ಮತ್ತು ಸಚಿವ ಸಂಪುಟದ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ ಎಂದು ಹೇಳಿದರು.





