
ಬೆಂಗಳೂರು, ಮಾ.11: ಪಶ್ಚಿಮ ಏಷ್ಯಾದಲ್ಲಿ ಇರಾನ್–ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿರುವ ಪರಿಣಾಮ ಪೆಟ್ರೋಲ್ ಹಾಗೂ ಅನಿಲ ಪೂರೈಕೆಯ ಮೇಲೆ ಪರಿಣಾಮ ಬೀರಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಎಲ್‌ಪಿಜಿ ಪೂರೈಕೆ ವ್ಯತ್ಯಯದಿಂದ ಅನೇಕ ಹೋಟೆಲ್‌ಗಳು ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದೇ ಸ್ಥಿತಿ ಮುಂದುವರೆದರೆ ನಗರದಾದ್ಯಂತ ಹೋಟೆಲ್‌ಗಳನ್ನು ಬಂದ್ ಮಾಡುವ ಕುರಿತು ಬೆಂಗಳೂರು ಹೋಟೆಲ್‌ಗಳ ಸಂಘ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಸಂಬಂಧಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಸಿಲಿಂಡರ್ ಕೊರತೆ ಗಂಭೀರ ಕಳವಳಕಾರಿಯಾಗಿದೆ. ಈ ಸಮಸ್ಯೆಯನ್ನು ಸಂಸತ್ತಿನಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಕೊರತೆ ಸಂಭವನೀಯತೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರತ್ಯೇಕವಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಪಿಎನ್‌ಜಿ ಸಂಪರ್ಕ ಅಥವಾ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗಳು ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲದ ಕಾರಣ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಹೋಟೆಲ್ ಉದ್ಯಮ, ಉದ್ಯೋಗ ಹಾಗೂ ಗ್ರಾಹಕರ ಸೇವೆಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತೇಜಸ್ವಿ ಸೂರ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಭಾರತಕ್ಕೆ ಪೂರೈಕೆಯಾಗುವ ಅನಿಲದಲ್ಲಿ ಶೇ.30ರಷ್ಟು ಪಾಲಿನ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ಕೊರತೆಯ ಭೀತಿ ಮೂಡಿರುವುದರಿಂದ ದೇಶೀಯ ಅಗತ್ಯಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಎಲ್‌ಪಿಜಿ ಉತ್ಪಾದನೆಯನ್ನು ಶೇ.10ರಷ್ಟು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಭರವಸೆ ನೀಡಿದೆ.
ಇದಕ್ಕೂ ನಡುವೆ ಗ್ಯಾಸ್ ಸಿಲಿಂಡರ್‌ಗಳ ಕಳ್ಳಬಜಾರ್ ಆರೋಪಗಳು ಕೇಳಿಬರುತ್ತಿದ್ದು, ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್ ಮತ್ತು ವಿತರಣೆಯಲ್ಲಿ ವಿಳಂಬ ಉಂಟಾಗಿದೆ ಎಂಬ ವರದಿಗಳು ಹೊರಬಂದಿವೆ. ಮುಂಬೈ, ಬೆಂಗಳೂರು ಮತ್ತು ಚೆನ್ನೈ ನಗರಗಳ ಆತಿಥ್ಯ ಸಂಘಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ತೀವ್ರ ಕೊರತೆ ಉಂಟಾಗಿದೆ ಎಂದು ತಿಳಿಸಿದ್ದು, ತಕ್ಷಣ ಸರಬರಾಜು ಪುನಃಸ್ಥಾಪಿಸದಿದ್ದರೆ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿವೆ.





